ನೇಜಾರು ಕೊಲೆ ಪ್ರಕರಣ - ವಿಶೇಷ ನ್ಯಾಯಾಲಯ ಸ್ಥಾಪನೆಗೆ ಸಿಎಂಗೆ ಮನವಿ

| Published : Dec 13 2023, 01:00 AM IST

ನೇಜಾರು ಕೊಲೆ ಪ್ರಕರಣ - ವಿಶೇಷ ನ್ಯಾಯಾಲಯ ಸ್ಥಾಪನೆಗೆ ಸಿಎಂಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿಯ ನೇಜಾರಿನಲ್ಲಿ ಕಳೆದ ತಿಂಗಳು ನಡೆದಿದ್ದ ತಾಯಿ ಮತ್ತು ಮೂರು ಮಕ್ಕಳ ಕೊಲೆ ಪ್ರಕರಣದ ತನಿಖೆಗೆ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಆಗ್ರಹಿಸಿ ಸಿಎಂಗೆ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ನೇಜಾರು ಎಂಬಲ್ಲಿ ನ.12ರಂದು ನಡೆದ ತಾಯಿ ಮತ್ತು ಮೂವರು ಮಕ್ಕಳ ಕಗ್ಗೊಲೆ ಪ್ರಕರಣದ ವಿಚಾರಣೆಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನ್ನು ನೇಮಿಸಬೇಕು ಮತ್ತು ತ್ವರಿತಗತಿಯಲ್ಲಿ ವಿಚಾರಣೆ ಪೂರ್ಣಗೊಳಿಸಿ ಆರೋಪಿಗೆ ಶಿಕ್ಷೆ ಖಾತ್ರಿ ಪಡಿಸಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಹಾಗೂ ಮುಸ್ಲಿಮ್ ಜಸ್ಟೀಸ್ ಫೋರಂ ನಿಯೋಗವು ಮಂಗಳವಾರ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಆಗ್ರಹಿಸಿತು.

ಜಿಲ್ಲೆಯ ಇತಿಹಾಸದಲ್ಲೇ ಇದೊಂದು ಅತ್ಯಂತ ಭಯಾನಕ ಕೃತ್ಯವಾಗಿದ್ದು, ಜಿಲ್ಲೆಯ ಜನರಲ್ಲಿ ಅಭದ್ರತೆಯ ಭಾವನೆ ಮೂಡಿಸಿದೆ. ಈ ಪ್ರಕರಣಕ್ಕೆ ಸರ್ಕಾರವು ಶೀಘ್ರವಾಗಿ ತಾರ್ಕಿಕ ಅಂತ್ಯವನ್ನು ಒದಗಿಸಬೇಕು ಎಂದು ನಿಯೋಗ ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಅವರು, ಅಗತ್ಯ ಕ್ರಮದ ಭರವಸೆ ನೀಡಿದರು.

ಈ ಸಂದರ್ಭ ಜಿಲ್ಲಾ ಮುಸ್ಲಿಮ್ ಒಕ್ಕೂಟ ತಾಲೂಕು ಅಧ್ಯಕ್ಷ ಮುಹಮ್ಮದ್ ಇರ್ಷಾದ್, ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಕಟಪಾಡಿ, ಸಂತ್ರಸ್ತ ಕುಟುಂಬದ ಯಜಮಾನ ನೂರ್ ಮುಹಮ್ಮದ್, ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಶಾಹುಲ್ ಹಮೀದ್, ದ.ಕ. ದಿಲ್ಲಾ ಸೆಂಟ್ರಲ್ ಮುಸ್ಲಿಮ್ ಕಮಿಟಿ ಕಾರ್ಯದರ್ಶಿ ಶಂಶುದ್ದೀನ್ ಸುಳ್ಯ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ರಿಜ್ವಾನ್ ಅರ್ಷದ್, ಸುರೇಶ್ ಶೆಟ್ಟಿ ಗುರ್ಮೆ, ಯಶ್‌ಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

ಇತರ ಆರೋಪಿಗಳ ಬಂಧನಕ್ಕೆ ಒತ್ತಾಯ

ಉಡುಪಿಯ ಪೊಲೀಸರು ಮುತುವರ್ಜಿ ವಹಿಸಿ ಕ್ಷಿಪ್ರವಾಗಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಸಮಗ್ರವಾಗಿ ವಿಚಾರಣೆಗೊಳಪಡಿಸಿ ಈ ಕೃತ್ಯದಲ್ಲಿ ಭಾಗಿಯಾದ ಅಥವಾ ಸಹಕರಿಸಿರಬಹುದಾದ ಇತರರನ್ನು ಬಂಧಿಸಬೇಕು ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಆಯಕಟ್ಟಿನ ಜಾಗದಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಬೇಕು ಎಂದು ನಿಯೋಗ ಮುಖ್ಯಮಂತ್ರಿಯನ್ನು ಒತ್ತಾಯಿಸಿದೆ.