ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲಾದ್ಯಂತ ಶುಕ್ರವಾರವೂ ಮಳೆ ಮುಂದುವರಿದಿದೆ. ಮಧ್ಯಾಹ್ನದ ಹೊತ್ತಿಗೆ ಗಾಳಿಯ ಜೊತೆಗೆ ಗುಡುಗುಮಿಂಚು ಕೂಡ ಕಾಣಿಸಿಕೊಂಡಿತ್ತು. ಮುಖ್ಯವಾಗಿ ಕಾರ್ಕಳ ಮತ್ತು ಉಡುಪಿ ತಾಲೂಕುಗಳಲ್ಲಿ ಜಡಿಮಳೆಯಾಗಿದೆ.ಗುರುವಾರ ಬೈಂದೂರು ಮತ್ತು ಕುಂದಾಪುರ ತಾಲೂಕುಗಳ ಸೌಪರ್ಣಿಕಾ, ವಾರಾಹಿ, ಸೀತಾ ನದಿಗಳು ದಡ ಹರಿದಿದ್ದು, ತಗ್ಗು ಬಯಲು ಪ್ರದೇಶಗಳು ಜಲಾವೃತಗೊಂಡಿದ್ದವು. ಆದರೆ ಶುಕ್ರವಾರ ಪ್ರವಾಹ ಕಡಿಮೆಯಾಗಿತ್ತು. ಮುಂಜಾಗರೂಕ ಕ್ರಮವಾಗಿ ಬೈಂದೂರು, ಕುಂದಾಪುರ, ಬ್ರಹ್ಮಾವರ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.
ಗುರುವಾರ ರಾತ್ರಿ ಮಳೆ ಸ್ವಲ್ಪ ಇಳಿಮುಖವಾಗಿದ್ದರೂ ಜಿಲ್ಲೆಯಲ್ಲಿ 8 ಮನೆಗಳಿಗೆ ಮತ್ತು 5 ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿದೆ.ಗಾಳಿಮಳೆಗೆ ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ಜಯಂತಿ ಶೇಖರ ಶೆಟ್ಟಿ ಅವರ ಮನೆ ಮೇಲೆ ಮರ ಬಿದ್ದು 50,000 ರು., ಕಂದಾವರ ಗ್ರಾಮದ ಮೂಕಮ್ಮ ಗೋವಿಂದ ಶೆಟ್ಟಿ ಅವರ ಮನೆಗೆ 10,000 ರು., ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಹಂಸ ಉದಯ ನಾಯ್ಕ ಅವರ ಮನೆಗೆ 25,000 ರು., ಸರೋಜಿನಿ ದೇವರಾಜು ಅವರ ಮನೆಗೆ ಸಂಪೂರ್ಣ ಹಾನಿಯಾಗಿದ್ದು 2,00,000 ರು., ಲೀಲಾ ಮೂಲ್ಯ ಅವರ ಮನೆಗೆ 30,000 ರು., ಬೇಬಿ ವೇಲು ಅವರ ಮನೆಗೆ 10,000 ರು., ಕಾಪುತಾಲೂಕಿನ ನಡ್ಸಾಲ್ ಗ್ರಾಮದ ಸತೀಶ್ ವೆಂಕಟೇಶ್ ಅವರ ಮನೆಗೆ 30,000 ರು., ಮೂಳೂರು ಗ್ರಾಮದ ಶಕುಂತಲಾ ಅವರ ಮನೆಗೆ 30,000 ರು. ನಷ್ಟ ಉಂಟಾಗಿದೆ.
ಅಲ್ಲದೇ ಕುಂದಾಪುರ ತಾಲೂಕಿನ ಹೆಂಗವಳ್ಳಿ ಗ್ರಾಮದ ಕನಕಮ್ಮ ಶೆಡ್ತಿ ಅವರ ತೋಟಗಾರಿಕೆ ಬೆಳೆಗೆ 10,000 ರು., ಹಾಲಾಡಿ ಗ್ರಾಮದ ಲಕ್ಷ್ಮೀ ಅವರ ಜಾನುವಾರು ಕೊಟ್ಟಿಗೆಗೆ 5,000 ರು., ಶಂಕರನಾರಾಯಣ ಗ್ರಾಮದ ವನಜ ಆನಂದ ಶೆಟ್ಟಿ ಅವರ ಜಾನುವಾರು ಕೊಟ್ಟಿಗೆಗೆ 10,000 ರು., ಶಂಕರ ಕುಲಾಲ ಅವರು ಜಾನುವಾರು ಕೊಟ್ಟಿಗೆಗೆ, 10,000 ಬ್ರಹ್ಮಾವರ ತಾಲೂಕಿನ ಐರೋಡಿ ಗ್ರಾಮದ ನಾರಾಯಣ ಕುಲಾಲ ಅವರ ಜಾನುವಾರು ಕೊಟ್ಟಿಗೆ 10,000 ರು.ಗಳಷ್ಟು ಹಾನಿಯಾಗಿದೆ.ಗುರುವಾರ ರಾತ್ರಿ ಜಿಲ್ಲೆಯಲ್ಲಿ ಸರಾಸರಿ 38.60 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಕಾರ್ಕಳ 33.70, ಕುಂದಾಪುರ 44.20, ಉಡುಪಿ 35.90, ಬೈಂದೂರು 40.70, ಬ್ರಹ್ಮಾವರ 46.10, ಕಾಪು 28, ಹೆಬ್ರಿ 33.60 ಮಿ.ಮೀ. ಮಳೆ ಆಗಿರುತ್ತದೆ.