ಉಡುಪಿ: ವಿಪರೀತ ಗಾಳಿಗೆ ಮನೆ, ಕೊಟ್ಟಿಗೆ, ತೋಟಗಳಿಗೆ ಭಾರಿ ಹಾನಿ

| Published : Jul 27 2024, 12:50 AM IST

ಉಡುಪಿ: ವಿಪರೀತ ಗಾಳಿಗೆ ಮನೆ, ಕೊಟ್ಟಿಗೆ, ತೋಟಗಳಿಗೆ ಭಾರಿ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಗಾಳಿ ಮಳೆಗೆ ಜಿಲ್ಲೆಯಲ್ಲಿ ಒಟ್ಟು 75 ಮನೆಗಳಿಗೆ ಸುಮಾರು 32.43 ಲಕ್ಷ ರು., 16 ಜಾನುವಾರು ಕೊಟ್ಟಿಗೆಗಳಿಗೆ 2.46 ಲಕ್ಷ ರು. ಮತ್ತು 7 ಕುಟುಂಬಗಳ ತೋಟಗಳಿಗೆ 2.77 ಲಕ್ಷ ರು. ಸೇರಿ ಒಟ್ಟು 37.66 ಲಕ್ಷ ರು.ಗಳ ಹಾನಿ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದರೂ, ಮಳೆಯ ಜೊತೆ ಬೀಸುತ್ತಿದ್ದ ವಿಪರೀತ ಗಾಳಿಗೆ ಮತ್ತೆ ನೂರಾರು ಮನೆ, ಜಾನುವಾರು ಕೊಟ್ಟಿಗೆಗಳಿಗೆ ಲಕ್ಷಾಂತರ ರು. ಹಾನಿಯಾಗಿದೆ. ಗುರುವಾರ ಗಾಳಿಮಳೆಗೆ ಬೈಂದೂರು ತಾಲೂಕಿನಲ್ಲಿ ಅತೀ ಹೆಚ್ಚು ಹಾನಿ ಸಂಭವಿಸಿದೆ. ಬಹುತೇಕ ಮನೆಗಳ ಮೇಲೆ ಗಾಳಿಗೆ ಮರಗಳು ಬಿದ್ದು ಹಾನಿ ಸಂಭವಿಸಿದೆ.

ಜಿಲ್ಲೆಯಲ್ಲಿ ಒಟ್ಟು 75 ಮನೆಗಳಿಗೆ ಸುಮಾರು 32.43 ಲಕ್ಷ ರು., 16 ಜಾನುವಾರು ಕೊಟ್ಟಿಗೆಗಳಿಗೆ 2.46 ಲಕ್ಷ ರು. ಮತ್ತು 7 ಕುಟುಂಬಗಳ ತೋಟಗಳಿಗೆ 2.77 ಲಕ್ಷ ರು. ಸೇರಿ ಒಟ್ಟು 37.66 ಲಕ್ಷ ರು.ಗಳ ಹಾನಿ ಸಂಭವಿಸಿದೆ.

ಬೈಂದೂರು ತಾಲೂಕೊಂದರಲ್ಲಿಯೇ 31 ಮನೆಗಳಿಗೆ 15.86 ಲಕ್ಷ ರು., 8 ಜಾನುವಾರು ಕೊಟ್ಟಿಗೆಗಳಿಗೆ 1.70 ಲಕ್ಷ ರು.ಗಳಷ್ಟು ಭಾರಿ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ.

ಕುಂದಾಪುರ ತಾಲೂಕಿನ 31 ಮನೆಗಳಗೆ 8.72 ಲಕ್ಷ ರು., 7 ಜಾನುವಾರು ಕೊಟ್ಟಿಗೆಗಳಿಗೆ 66 ಸಾವಿರ ರು. ಮತ್ತು 8 ಕುಟುಂಬಗಳ ತೋಟಗಳಿಗೆ 2.77 ಲಕ್ಷ ರು. ಹಾನಿಯಾಗಿದೆ.

ಉಡುಪಿ ತಾಲೂಕಿನ 6 ಮನೆಗಳಿಗೆ 3.30 ಲಕ್ಷ ರು. ಮತ್ತು ಒಂದು ಕೊಟ್ಟಿಗೆಗೆ 10 ಸಾವಿರ ರು., ತಾಲೂಕಿನ ಒಂದು ಮನೆಗೆ 2 ಲಕ್ಷ ರು., ಕಾರ್ಕಳ ತಾಲೂಕಿನ 4 ಮನೆಗಳಿಗೆ 2.55 ಲಕ್ಷ ರು.ಗಳಷ್ಟು ನಷ್ಟ ಉಂಟಾಗಿದೆ.

ಕುಂದಾಪುರ ತಾಲೂಕಿನಲ್ಲಿ 2 ಮನೆಗಳು, ಉಡುಪಿ ಕಾಪು ಮತ್ತು ಕಾರ್ಕಳ ಕಾಲೂಕಿನ 3 ಮನೆಗಳು ಬಹುತೇಕ ಸಂಪೂರ್ಣ ಹಾನಿಗೊಂಡಿವೆ. ಕುಂದಾಪುರ ತಾಲೂಕಿನ ಇಡೂರು ಕುಂಜ್ಞಾಡಿಯ ಕೃಷಿಕ ತೋಟಕ್ಕೆ ಲಕ್ಷಾಂತರ ರು. ಹಾನಿಯಾಗಿದೆ.

ಶುಕ್ರವಾರ ಮುಂಜಾನೆ ವರೆಗೆ 24 ಗಂಟೆಗಳಲ್ಲಿ ಸರಾಸರಿ 54.90 ಮಿ.ಮೀ. ಮಳೆಯಾಗಿದೆ. ಕಾರ್ಕಳ 50.70, ಕುಂದಾಪುರ 56.10, ಉಡುಪಿ 45.70, ಬೈಂದೂರು 45.90, ಬ್ರಹ್ಮಾವರ 62.30, ಕಾಪು 22.30, ಹೆಬ್ರಿ 87 ಮಿ.ಮೀ. ಮಳೆಯಾಗಿದೆ.

* ಹಿರಿಯಡ್ಕ 2 ಆಟೋಗಳು ಜಖಂ

ಭಾರಿ ಸುಂಟರಗಾಳಿಗೆ ತೆಂಗಿನ ಮರವೊಂದು ಉರುಳಿದ ಪರಿಣಾಮ ಮನೆ ಹಾಗೂ ಎರಡು ರಿಕ್ಷಾಗಳಿಗೆ ಹಾನಿಯಾಗಿ ಲಕ್ಷಾಂತರ ರು. ನಷ್ಟ ಉಂಟಾಗಿರುವ ಘಟನೆ ಹಿರಿಯಡ್ಕ ಸಮೀಪ ಕುಕ್ಕೆಹಳ್ಳಿಯಲ್ಲಿ ಶುಕ್ರವಾರ ನಸುಕಿನ ವೇಳೆ 2 ಗಂಟೆಗೆ ನಡೆದಿದೆ.

ಬಜೆಯ ಅಮ್ಮಣ್ಣಿ ಸೇರಿಗಾರ್ತಿ ಎಂಬವರ ಮನೆಯ ಮೇಲೆ ಈ ಮರ ಬಿದ್ದಿದೆ. ಮನೆ ಬಳಿ ನಿಲ್ಲಿಸಿದ ಅಮ್ಮಣಿ ಅವರ ಮಕ್ಕಳಾದ ಗಣಪತಿ ಸೇರಿಗಾರ ಹಾಗೂ ರವಿ ಸೇರಿಗಾರ ಅವರ ಆಟೋ ರಿಕ್ಷಾಗಳು ಸಂಪೂರ್ಣ ಜಖಂಗೊಂಡು, ಲಕ್ಷಾಂತರ ರು. ನಷ್ಟ ಉಂಟಾಗಿದೆ.