ಉಡುಪಿ ಉಸ್ತುವಾರಿ ಸಚಿವೆ ಧ್ವಜಾರೋಹಣಕ್ಕೆ ಸೀಮಿತ: ನವೀನ್ ಶೆಟ್ಟಿ ಕುತ್ಯಾರು

| Published : Sep 09 2025, 01:01 AM IST

ಉಡುಪಿ ಉಸ್ತುವಾರಿ ಸಚಿವೆ ಧ್ವಜಾರೋಹಣಕ್ಕೆ ಸೀಮಿತ: ನವೀನ್ ಶೆಟ್ಟಿ ಕುತ್ಯಾರು
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಬೆಂಗಳೂರಿನಲ್ಲಿ ಕುಳಿತೇ ಉಡುಪಿಯ ಅಧಿಕಾರಿಗಳಿಗೆ ಸೂಚನೆ, ಹೇಳಿಕೆ ನೀಡುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೇವಲ ಧ್ವಜಾರೋಹಣ ಮತ್ತು ಅಂಗನವಾಡಿಗಳ ಉದ್ಘಾಟನೆಗೆ ಸೀಮಿತವಾಗಿದ್ದಾರೆ. ಜಿಲ್ಲೆಯಲ್ಲಿ ಮಳೆಯಿಂದ ಭಾರಿ ಹಾನಿಯಾಗಿದ್ದರೂ ಅವರು ಮಾತ್ರ ಬೆಂಗಳೂರಿನಲ್ಲಿ ಕುಳಿತೇ ಉಡುಪಿಯ ಅಧಿಕಾರಿಗಳಿಗೆ ಸೂಚನೆ, ಹೇಳಿಕೆ ನೀಡುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಆರೋಪಿಸಿದ್ದಾರೆ.

ಅವರು ಶನಿವಾರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸಚಿವೆ ಜಿಲ್ಲೆಗೆ ಬಂದು ಜನರ ಬೇಡಿಕೆಗಳನ್ನು ಈಡೇರಿಸುವುದು, ನಷ್ಟ ಪರಿಹಾರಕ್ಕೆ ಹಣ ಬಿಡುಗಡೆ ಮಾಡುವುದು, ಜಿಲ್ಲೆಯ ಉಸ್ತುವಾರಿಯಾಗಿ ಅವರ ಕರ್ತವ್ಯವಾಗಿದೆ. ಅದನ್ನವರು ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಪೂರ್ಣ ಮನೆಹಾನಿಗೆ 5 ಲಕ್ಷ ರು., ಭಾಗಶಃ ಮನೆಹಾನಿಗೆ 3 ಲಕ್ಷ ರು. ಮತ್ತು ಸಣ್ಣಪುಟ್ಟ ಹಾನಿಗಳಿಗೆ 1 ಲಕ್ಷ ರು. ನಷ್ಟ ಪರಿಹಾರ ನೀಡಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಪೂರ್ಣ ಮನೆಹಾನಿಗೆ 1.20 ಲಕ್ಷ ರು., ಭಾಗಶಃ ಹಾನಿಗೆ 6,500 ರು. ಪರಿಹಾರ ನೀಡುತ್ತಿದೆ. ಈ ಬಾರಿಯ ಅನಿರೀಕ್ಷಿತ ಮಳೆಯಿಂದ ರೈತರು, ಜನರು ತತ್ತರಿಸಿಹೋಗಿದ್ದಾರೆ. ಆದರೇ ಸರ್ಕಾರ ಅಗತ್ಯ ಪರಿಹಾರ ನೀಡದೇ ಜನಸಾಮಾನ್ಯರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.ಉಡುಪಿ ಜಿಲ್ಲೆಯ ಗ್ರಾಮೀಣ ಮತ್ತು ಲೋಕೋಪಯೋಗಿ ರಸ್ತೆಗಳ ದುರಸ್ತಿಗೆ ಜಿಲ್ಲಾಡಳಿತ ಸರ್ಕಾರಕ್ಕೆ 125 ಕೋಟಿ ರು. ಬೇಡಿಕೆ ಸಲ್ಲಿಸಿದೆ. ಶಾಸಕರು ಕೂಡ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಆದರೇ ಸರ್ಕಾರ ಬಿಡಿಗಾಸು ಬಿಡುಗಡೆ ಮಾಡಿಲ್ಲ ಎಂದರು.ಕಾಂಗ್ರೆಸಿಂದ ಸುಳ್ಳು ಟೀಕೆ

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರ್ಥಿಕ ಪ್ರಕೋಷ್ಠದ ಸಂಚಾಲಕರಾದ ದಿವಾಕರ್ ಶೆಟ್ಟಿ, ಕೇಂದ್ರ ಸರ್ಕಾರ ಜಿಎಸ್‌ಟಿ ಸರಳೀಕರಣವನ್ನು ರಾಜ್ಯ ಸರ್ಕಾರ ರಾಜಕೀಯಕ್ಕಾಗಿ ಟೀಕಿಸುತ್ತಿದೆ. ಗೃಹಸಚಿವ ಪರಮೇಶ್ವರ್ ಅವರು ಕೇಂದ್ರ ಸರ್ಕಾರ ಜಿಎಸ್‌ಟಿ ಸರಳೀಕರಣದಿಂದ ರಾಜ್ಯಕ್ಕೆ 70 ಸಾವಿರ ಕೋಟಿ ರು. ತೆರಿಗೆ ಆದಾಯ ನಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದುದು, ಕೇಂದ್ರ ಸರ್ಕಾರಕ್ಕೇ ಇಷ್ಟು ನಷ್ಟವಾಗುತ್ತಿಲ್ಲ, ರಾಜ್ಯ ಸರ್ಕಾರಕ್ಕೆ ಹೆಚ್ಚೆಂದರೇ 4 ರಿಂದ 5 ಸಾವಿರ ಕೋಟಿ ರು. ಗಳಷ್ಟೇ ನಷ್ಟವಾಗಬಹುದು. ಅದನ್ನು ಸರ್ಕಾರ ಜನರ ಕಿಸೆಯಿಂದ ಭರಿಸಬೇಕು ಎನ್ನುವುದು ಸರಿಯಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಕಾರ್ಯದರ್ಶಿ ಶ್ರೀಕಾಂತ ನಾಯಕ್ ಅಲೆವೂರು, ಗಿರೀಶ್ ಅಂಚನ್, ಕಚೇರಿ ಕಾರ್ಯದರ್ಶಿ ಶಿವಕುಮಾರ್, ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಜೆ ಉಪಸ್ಥಿತರಿದ್ದರು.