ಉಡುಪಿ: ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಚಾಲನೆ

| Published : Dec 04 2024, 12:32 AM IST

ಸಾರಾಂಶ

ಯಕ್ಷಶಿಕ್ಷಣ ಟ್ರಸ್ಟ್‌ನಿಂದ ಯಕ್ಷಗಾನ ತರಬೇತಿ ಪಡೆದ ಉಡುಪಿ ಆಸುಪಾಸಿನ ೨೭ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ನ.೩೦ರಿಂದ ಡಿ.೧೪ರ ವರೆಗೆ ಕೃಷ್ಣಮಠದ ರಾಜಾಂಗಣದಲ್ಲಿ ಕಿಶೋರ ಯಕ್ಷಗಾನ ಸಂಭ್ರಮ ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಯಕ್ಷಶಿಕ್ಷಣ ಟ್ರಸ್ಟ್‌ನಿಂದ ಯಕ್ಷಗಾನ ತರಬೇತಿ ಪಡೆದ ಉಡುಪಿ ಆಸುಪಾಸಿನ ೨೭ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ನ.೩೦ರಿಂದ ಡಿ.೧೪ರ ವರೆಗೆ ಕೃಷ್ಣಮಠದ ರಾಜಾಂಗಣದಲ್ಲಿ ಪ್ರದರ್ಶನಗೊಳ್ಳಲಿರುವ ಕಿಶೋರ ಯಕ್ಷಗಾನ ಸಂಭ್ರಮ - ೨೦೨೪ವನ್ನು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿದರು.ನಂತರ ಆಶೀರ್ವಚನ ನೀಡಿದ ಶ್ರೀಗಳು, ವಿಶ್ವಾದ್ಯಂತ ಸಾವಿರಾರು ಮಂದಿ ನಲಿದ, ನರ್ತಿಸಿದ, ಹಾಡಿದ, ಕಲೆಯನ್ನು ಪ್ರದರ್ಶಿಸಿದ ಈ ವೇದಿಕೆಯಲ್ಲಿ ಮಕ್ಕಳು ಕುಣಿದಾಡುವುದು ಕೃಷ್ಣನಿಗೆ ಬಹಳ ಸಂತಸದ ವಿಚಾರ. ಯಕ್ಷಶಿಕ್ಷಣ ಒಂದು ದೇಶಕ್ಕೆ ಮಾದರಿಯಾದಂತಹ ಸಂಸ್ಥೆ. ಈ ಅಭಿಯಾನ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.ಅಂಬಲಪಾಡಿ ಧರ್ಮದರ್ಶಿಗಳಾದ ಡಾ. ನಿ.ಬೀ. ವಿಜಯ ಬಲ್ಲಾಳ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಕೆ. ಗಣಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಯಲ್ಲಮ್ಮ, ಅಮೆರಿಕಾದ ಯಕ್ಷಗಾನಾಸಕ್ತ ಪಣಂಬೂರು ವಾಸುದೇವ ಐತಾಳ್, ದಾನಿ ಯು. ವಿಶ್ವನಾಥ ಶೆಣೈ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಿಸಿದರು. ಯಕ್ಷಶಿಕ್ಷಣ ಟ್ರಸ್ಟ್‌ನ ವಿಶ್ವಸ್ಥರಾದ ನಾರಾಯಣ ಎಂ. ಹೆಗಡೆ ವಂದಿಸಿದರು. ಸಮಾರಂಭದ ಬಳಿಕ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳಿಂದ ನರಸಿಂಹ ತುಂಗರ ನಿರ್ದೇಶನದಲ್ಲಿ ಶಶಿಪ್ರಭಾ ಪರಿಣಯ ಸೊಗಸಾಗಿ ಪ್ರಸ್ತುತಗೊಂಡಿತು.