ಉಡುಪಿ ಪರ್ಯಾಯೋತ್ಸವಕ್ಕೆ ನಗರದ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ ಇತ್ಯಾದಿಗಳ ಅಭಿವೃದ್ಧಿಗೆ ಜಿಲ್ಲೆಯ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಒಟ್ಟು 5 ಕೋಟಿ ರು.ಗಳನ್ನು ನೀಡಿದ್ದಾರೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.

ಉಡುಪಿ: ಉಡುಪಿ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ನಗರದ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ ಇತ್ಯಾದಿಗಳ ಅಭಿವೃದ್ಧಿಗೆ ಜಿಲ್ಲೆಯ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಒಟ್ಟು 5 ಕೋಟಿ ರು.ಗಳನ್ನು ನೀಡಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.

ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ‍‍ಕರ್‌ ಅವರು, ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ 6 ಕೋಟಿ ರು. ವೆಚ್ಚದಲ್ಲಿ ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕರು ಸಚಿವೆಗೆ ಕೃತಜ್ಞತೆ ಅಭಿನಂದನೆಗಳನ್ನು ಸಲ್ಲಿಸಿದ್ದರು.

ಆದರೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು, ಪರ್ಯಾಯೋತ್ಸವಕ್ಕೆ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರೂ, ಸರ್ಕಾರ ಅನುದಾನ ನೀಡದೆ ನಿರ್ಲಕ್ಷ ವಹಿಸಿದೆ. ಆದರೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಜಿಲ್ಲಾ ಖನಿಜ ಪ್ರತಿಷ್ಠಾನಕ್ಕೆ ತಮ್ಮ ಅನುದಾನವನ್ನು ಉಡುಪಿ ನಗರದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ನೀಡಲು ಒಪ್ಪಿದ್ದಾರೆ. ಅವರಿಗೆ ಉಡುಪಿ ಜನತೆಯ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.

ಬಿಜೆಪಿ ನಾಯಕರ ಆಕ್ಷೇಪ: ಉಸ್ತುವಾರಿ ಸಚಿವರು ಪರ್ಯಾಯೋತ್ಸವಕ್ಕೆ ರಾಜ್ಯ ಸರ್ಕಾರ 5 ಕೋಟಿ ರು. ನೀಡಿರುವುದಾಗಿ ಹೇಳಿ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ನಗರಸಭೆ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಡುಪಿ ಬಿಜೆಪಿ ನಗರ ಅಧ್ಯಕ್ಷ ದಿನೇಶ್ ಅಮೀನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಜಿಲ್ಲಾ ಗಣಿ ಇಲಾಖೆಯಲ್ಲಿ ಸಂಗ್ರಹವಾದ 11 ಕೋಟಿ ರು. ತೆರಿಗೆ ಹಣ ಇದೆ. ಅದನ್ನು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಬಳಸಲಾಗುತ್ತದೆ. ಆದರೆ ಶಾಸಕರು ಈ ಹಣದಲ್ಲಿ 5 ಕೋಟಿ ರು. ಗಳನ್ನು ಪರ್ಯಾಯೋತ್ಸವಕ್ಕೆ ಬಿಟ್ಟುಕೊಟ್ಟಿದ್ದಾರೆ. ಇದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದವರು ಹೇಳಿದ್ದಾರೆ.