ಉಡುಪಿ: ಸ್ನೇಹಿತನ ಕೊಲೆ ಮಾಡಿ ಠಾಣೆಗೆ ಕರೆ ಮಾಡಿದ!

| Published : Oct 23 2024, 12:54 AM IST / Updated: Oct 23 2024, 12:55 AM IST

ಸಾರಾಂಶ

ಯುವಕನೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನ ಗೆಳೆಯನೊಂದಿಗೆ ಜಗಳವಾಡಿ ಕತ್ತಿಗೆಗೆ ಚೂರಿಯಿಂದ ಇರಿದು ಭೀಕರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಯುವಕನೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನ ಗೆಳೆಯನೊಂದಿಗೆ ಜಗಳವಾಡಿ ಕತ್ತಿಗೆಗೆ ಚೂರಿಯಿಂದ ಇರಿದು ಭೀಕರವಾಗಿ ಹತ್ಯೆಗೈದಿರುವ ಘಟನೆ ನಗರದ ಹಳೆ ಕೆಎಸ್‌ಆರ್‌ಟಿಸಿ ಬಳಿಯ ಕೃಷ್ಣಕೃಪಾ ಕಾಂಪ್ಲೆಕ್ಸ್ ನೆಲ ಅಂತಸ್ತಿನ ಕೊಠಡಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.ಕೊರಂಗ್ರಪಾಡಿಯ ಪ್ರಶಾಂತ್ (32) ಕೊಲೆಯಾದ ಯುವಕ. ಈತನ ಸ್ನೇಹಿತ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ನಿವಾಸಿ ಈರಣ್ಣ ಯಾನೆ ದಿನೇಶ್ (36) ಕೊಲೆ ಮಾಡಿರುವ ಆರೋಪಿ.ಇಬ್ಬರು ಗೆಳೆಯರಾಗಿದ್ದು, ಬೆಳ್ಳಂಬೆಳಗ್ಗೆ ಜೊತೆಯಾಗಿ ಮದ್ಯಪಾನ ಮಾಡಿದ್ದರು. ದಿನೇಶ್ ಕೆಲವು ದಿನಗಳ ಹಿಂದೆ ಪ್ರಶಾಂತ್‌ಗೆ ಸ್ವಲ್ಪ ಹಣ ಸಾಲ ನೀಡಿದ್ದ, ಮಂಗಳ‍ವಾರ ಮದ್ಯಪಾನ ಮಾಡಿ ಕೃಷ್ಣಕೃಪಾ ಕಾಂಪ್ಲೆಕ್ಸ್ ಬಂದು ದಿನೇಶ್ ಸಾಲ ಹಿಂದಕ್ಕೆ ನೀಡುವಂತೆ ಪ್ರಶಾಂತ್‌ನನ್ನು ಕೇಳಿದ್ದಾನೆ. ಪ್ರಶಾಂತ್ ಹಣ ಕೊಡದೇ ಇದ್ದಾಗ, ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿದೆ. ಆರೋಪಿ ಈರಣ್ಣ ಹರಿತವಾದ ಚೂರಿಯಿಂದ ಪ್ರಶಾಂತ್‌ನ ಕತ್ತಿಗೆ ಇರಿದುಬಿಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡ ಪ್ರಶಾಂತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕೊಲೆಗೈದ ಬಳಿಕ ಆರೋಪಿಯು ಖುದ್ದು ಪೊಲೀಸರಿಗೆ ಕರೆ ಮಾಡಿ, ಸ್ನೇಹಿತನನ್ನು ಕೊಲೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾನೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಸ್ಥಳ ಮತ್ತು ಶವ ಮಹಜರಿಗೆ ಸಮಾಜಸೇವಕ ನಿತ್ಯಾನಂದ ಒಳಕಾಡು ಪೊಲೀಸರಿಗೆ ಸಹಕರಿಸಿದರು.