ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಶುಕ್ರವಾರ, ಬೆಳ್ತಂಗಡಿ ತಾಲೂಕಿನ ಸಮಸ್ತ ನಾಗರಿಕರ ಪರವಾಗಿ ನಡೆದ ಪೌರ ಸನ್ಮಾನ ಸ್ವೀಕರಿಸಿ ಆಶೀರ್ವಚನ
ಬೆಳ್ತಂಗಡಿ: ಸಂಪತ್ತು, ಐಶ್ವರ್ಯ, ಜ್ಞಾನದಿಂದ ಕ್ಷಣಿಕ ಸುಖ ಸಿಗುತ್ತದೆ. ಆದರೆ ಮೋಕ್ಷದಿಂದ ಮಾತ್ರ ಶಾಶ್ವತ ಸುಖ ಸಿಗಲು ಸಾಧ್ಯ. ಮೋಕ್ಷ ಕೊಡುವವನು ಜನಾರ್ದನ. ಜ್ಞಾನ ಸಂಪಾದನೆ ಮಾಡಿ ಪರಮಾತ್ಮನನ್ನು ಚೆನ್ನಾಗಿ ತಿಳಿದುಕೊಂಡರೆ ಜನಾರ್ದನ ಮೋಕ್ಷ ಕರುಣಿಸುತ್ತಾನೆ. ಎಲ್ಲರೂ ಪರಮಾತ್ಮನನ್ನು ಸರಿಯಾಗಿ ತಿಳಿದುಕೊಂಡು ಕೃಷ್ಣನನ್ನು ಆರಾಧನೆ ಮಾಡಿ ಎಂದು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಸರ್ವಜ್ಞ ಪೀಠಾರೋಹಣ ಮಾಡಲಿರುವ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಹೇಳಿದರು.ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಶುಕ್ರವಾರ, ಬೆಳ್ತಂಗಡಿ ತಾಲೂಕಿನ ಸಮಸ್ತ ನಾಗರಿಕರ ಪರವಾಗಿ ನಡೆದ ಪೌರ ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡಿದರು.
ಉಡುಪಿಯ ಪರ್ಯಾಯ ಎಲ್ಲಾ ಭಕ್ತರಿಗೆ ಶ್ರೀ ಕೃಷ್ಣನ ಸೇವೆ ಸಲ್ಲಿಸಲು ಇರುವ ಉತ್ತಮ ಅವಕಾಶ. ಇದರಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಶ್ರೀ ಕೃಷ್ಣ ನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.ನಾವೂರಿನ ವೈದ್ಯ ಡಾ.ಪ್ರದೀಪ್ ನಾವೂರು ಅಭಿನಂದನಾ ನುಡಿಗಳನ್ನಾಡಿ ಆತ್ಮ ಕಲ್ಯಾಣ, ಲೋಕ ಕಲ್ಯಾಣದ ನಿರ್ಧಾರದ ಜತೆ ಉಡುಪಿ ಶ್ರೀ ಕೃಷ್ಣನ ಸೇವೆಯ ಪುಣ್ಯ ಸಿಗುವುದೇ ಶ್ರೇಷ್ಠ. ತಾಲೂಕಿನ ಯತಿಗಳೊಬ್ಬರಿಗೆ ಶ್ರೀ ಕೃಷ್ಣಪೂಜಾವಕಾಶ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.ಪೌರ ಸನ್ಮಾನ ಸಮಿತಿ ಸಂಚಾಲಕ ಶಾಸಕ ಹರೀಶ್ ಪೂಂಜ ಮಾತನಾಡಿ, ಹಿಂದೂ ಧರ್ಮದ ವಿಶೇಷ ಶಕ್ತಿ ಉಡುಪಿಯ ಮಠಗಳು. ಬೆಳ್ತಂಗಡಿ ಮತ್ತು ಉಡುಪಿಯ ಬೆಸುಗೆಯನ್ನು ಈ ಬಾರಿಯ ಪರ್ಯಾಯ ಇನ್ನಷ್ಟು ಗಟ್ಟಿ ಗೊಳಿಸಿದೆ. ಇದೊಂದು ಅವಿಸ್ಮರಣೀಯ ಪರ್ಯಾಯ ವಾಗಲಿದೆ. ಪರ್ಯಾಯ ಸಂದರ್ಭ ತಾಲೂಕಿನಿಂದ ಹೊರೆ ಕಾಣಿಕೆ ಸಮರ್ಪಣೆ ನಡೆಯಲಿದೆ. ಸ್ವಾಮೀಜಿಯವರ ಪೂರ್ವಾಶ್ರಮ ನಮ್ಮ ತಾಲೂಕು ಎಂಬುದು ಅತ್ಯಂತ ಹೆಮ್ಮೆಯ ವಿಚಾರ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಪೌರ ಸನ್ಮಾನ ಸಮಿತಿ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಅಷ್ಟಮಠದ ಯತಿಗಳು ಪೀಠಾರೋಹಣಕ್ಕೆ ಮೊದಲು ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ದರ್ಶನ ಪಡೆಯುವುದು ವಾಡಿಕೆ. ಶ್ರೀಗಳು ದೇವಸ್ಥಾನದ ವಸಂತ ವೇದ ಪಾಠ ಶಿಬಿರ ದ ಶಿಬಿರಾರ್ಥಿಯಾಗಿದ್ದರು ಎಂದರು. ಉದ್ಯಮಿ, ಪೌರಸನ್ಮಾನ ಸಮಿತಿ ಸಂಚಾಲಕ ಕೆ.ಮೋಹನ್ ಕುಮಾರ್, ಶೀರೂರು ಮಠದ ದಿವಾನ ಡಾ. ಉದಯ ಕುಮಾರ್ ಸರಳತ್ತಾಯ, ಎಸ್ ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ವಿಹಿಂಪ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಉಪಸ್ಥಿತರಿದ್ದರು. ಮುರಳಿ ಕೃಷ್ಣ ಆಚಾರ್ ಮತ್ತು ಶ್ರೀನಿವಾಸ ರಾವ್ ನಿರೂಪಿಸಿದರು. ಪೌರ ಸನ್ಮಾನ ಸಮಿತಿ ಕಾರ್ಯದರ್ಶಿ ಪೂರನ್ ವರ್ಮ ವಂದಿಸಿದರು.
ವೈಭವಯುತ ಮೆರವಣಿಗೆಶ್ರೀಗಳವರನ್ನು ಬೆಳಾಲು ತಿರುವಿನಿಂದ ಮುಖ್ಯ ವೃತ್ತಕ್ಕಾಗಿ ತೆರೆದ ರಜತ ರಥದಲ್ಲಿ ನಡೆದ ಶೋಭಾಯಾತ್ರೆಯಲ್ಲಿ ವೈದಿಕರಿಂದ ವೇದಘೋಷ, ನಾದಸ್ವರ ವಾದನ, ಚೆಂಡೆ ಮೇಳ, ಭಜನಾ ತಂಡ, ಮಹಿಳೆಯರಿಂದ ಪೂರ್ಣಕುಂಭ ಸಹಿತ ಸಂಭ್ರಮದ ಮೆರವಣಿಗೆಯಲ್ಲಿ ಕರೆತರಲಾಯಿತು. ಶ್ರೀಗಳವರು ಶ್ರೀ ಜನಾರ್ದನ ಸ್ವಾಮಿ ಹಾಗು ಪರಿವಾರ ದೇವರು ಮತ್ತು ಶ್ರೀ ಮಧ್ವಾಚಾರ್ಯರ ಸನ್ನಿಧಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕ್ರಿಷ್ಣ ಪಡುವೆಟ್ನಾಯರು ಸ್ವಾಗತಿಸಿ, ಕ್ಷೇತ್ರದ ವತಿಯಿಂದ ಗೌರವಿಸಿದರು. ಶ್ರೀಗಳಿಗೆ ಶಾಸಕರು ರಜತ ರಥಾರತಿ ಸಮರ್ಪಿಸಿ, ಗಣ್ಯ ಅತಿಥಿಗಳು ಗೌರವಿಸಿದರು.