ಪುತ್ತಿಗೆ ಶ್ರೀಗಳಿಗೆ ಕೃಷ್ಣ ಪೂಜೆಯ ಅಧಿಕಾರ ಹಸ್ತಾಂತರಿಸಿದ ಅದಮಾರು ಶ್ರೀಗಳು

| Published : Jan 18 2024, 08:39 AM IST / Updated: Jan 18 2024, 04:23 PM IST

puttige shri
ಪುತ್ತಿಗೆ ಶ್ರೀಗಳಿಗೆ ಕೃಷ್ಣ ಪೂಜೆಯ ಅಧಿಕಾರ ಹಸ್ತಾಂತರಿಸಿದ ಅದಮಾರು ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತಿಗೆ ಶ್ರೀಗಳಿಗೆ ಕೃಷ್ಣ ಪೂಜೆಯ ಅಧಿಕಾರ ಹಸ್ತಾಂತರಿಸಿದ ಅದಮಾರು ಶ್ರೀಗಳು ಪುತ್ತಿಗೆ ಪರ್ಯಾಯ ಅಪೂರ್ವ ಘಟನೆಗೆ ಸಾಕ್ಷಿಯಾಯಿತು, ಅಷ್ಟಮಠಗಳ ನಡುವೆ ಒಗ್ಗಟ್ಟಿನ ಭರವಸೆ ಮೂಡಿಸಿತು

ಕನ್ನಡಪ್ರಭ ವಾರ್ತೆ, ಉಡುಪಿ 

ಗುರುವಾರ ಮುಂಜಾನೆ ನಡೆದ ಪುತ್ತಿಗೆ ಮಠದ 4ನೇ ಪರ್ಯಾಯೋತ್ಸವು ಅಪೂರ್ವ ಘಟನೆಗೆ ಸಾಕ್ಷಿಯಾಯಿತು. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಕೈಹಿಡಿದು ಸರ್ವಜ್ಞ ಪೀಠಾರೋಹಣ ಮಾಡಿಸಿ, ಕೃಷ್ಣನ ಪೂಜೆಯ ಅಧಿಕಾರವನ್ನು ಒಪ್ಪಿಸಿದರು. 

ಪುತ್ತಿಗೆ ಶ್ರೀಗಳು ವಿದೇಶ ಪ್ರಯಾಣ, ಸಮುದ್ರೊಲ್ಲಂಘನೆ ಮಾಡಿದ್ದು ಶಾಸ್ತ್ರ ಉಲ್ಲಂಘನೆ ಎಂಬ ಕಾರಣಕ್ಕೆ ಅವರ 3ನೇ ಪರ್ಯಾಯೋತ್ಸವ, ಮೆರವಣಿಗೆ, ದರ್ಬಾರ್ ನಲ್ಲಿ ಇತರ ಸ್ವಾಮೀಜಿಗಳು ಭಾಗವಹಿಸಿರಲಿಲ್ಲ. 

ಅಂದು ಭೀಮನಕಟ್ಟೆ ಮಠದ ಶ್ರೀ ರಘುಮಾನ್ಯ ತೀರ್ಥರು ಪುತ್ತಿಗೆ ಶ್ರೀಗಳಿಗೆ ಪೀಠಾರೋಹಣಕ್ಕೆ ಸಹಕರಿಸಿದ್ದರು. ಈ ಬಾರಿಯೂ ಇತರ ಮಠಾಧೀಶರು ಪರ್ಯಾಯೋತ್ಸವದಲ್ಲಿ ಭಾಗವಹಿಸದೇ ಇರುವುದರಿಂದ ಪುತ್ತಿಗೆ ಶ್ರೀಗಳಿಗೆ ಪರ್ಯಾಯ ಅಧಿಕಾರ ಹಸ್ತಾಂತರ ಯಾರು ಮಾಡುತ್ತಾರೆ ಎಂಬ ಬಗ್ಗೆ ಭಕ್ತರಲ್ಲಿ ಆತಂಕ ಉಂಟಾಗಿತ್ತು. 

ಈ ಆತಂಕವನ್ನು ಅದಮಾರು ಶ್ರೀಗಳು ನಿರಾತಂಕಗೊಳಿಸಿದ್ದಾರೆ. ಈ ಬಾರಿಯೂ ಪುತ್ತಿಗೆ ಶ್ರೀಗಳ ಪರ್ಯಾಯೋತ್ಸವದ ಮೆರವಣಿಗೆಯಲ್ಲಿ, ದರ್ಬಾರಿನಲ್ಲಿ ಇತರ ಮಠಾಧೀಶರು ಭಾಗವಹಿಸಿರಲಿಲ್ಲ.

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಪಟ್ಟ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರೊಂದಿಗೆ ಮೆರವಣಿಗೆಯಲ್ಲಿ ಕೃಷ್ಣಮಠಕ್ಕೆ ಆಗಮಿಸಿದ್ದರು. 

ಕಳೆದ 2 ವರ್ಷಗಳಿಂದ ಕೃಷ್ಣ ಪರ್ಯಾಯ ಪೂಜೆಯನ್ನು ಯಶಸ್ವಿಯಾಗಿ ನಡೆಸಿದ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರು ತಮ್ಮ ಕೊನೆಯ ಪೂಜೆಯನ್ನು ಮುಗಿಸಿ ತಮ್ಮ ಮಠಕ್ಕೆ ಹಿಂತಿರುಗಿದ್ದರು. 

ನಿರ್ಗಮನ ಪೀಠಾಧೀಶರು ಅಕ್ಷಯಪಾತ್ರೆ, ಕೃಷ್ಣಮಠದ ಕೀಲಿಕೈಗಳನ್ನು ನಿಯೋಜಿತ ಪೀಠಾದೀಶರಿಗೆ ಹಸ್ತಾಂತರಿಸಿ, ಸರ್ವಜ್ಞ ಪೀಠಾರೋಹಣ ಮಾಡಿಸಿ, ಕೃಷ್ಣನ ಪೂಜೆಯ ಅಧಿಕಾರವನ್ನು ಬಿಟ್ಟುಕೊಡುವುದು ಪದ್ದತಿಯಾಗಿದೆ. 

ಗುರುವಾರ ಮುಂಜಾನೆ ಪುತ್ತಿಗೆ ಶ್ರೀಗಳಿಗೆ ಅದಮಾರು ಶ್ರೀಗಳು ಅಕ್ಷಯಪಾತ್ರೆಯನ್ನು ಹಸ್ತಾಂತರಿಸಿ, ಸರ್ವಜ್ಞ ಪೀಠಾರೋಹಣ ಮಾಡಿಸಿ, ಅಷ್ಟ ಮಠಗಳ ನಡುವೆ ಒಗ್ಗಟ್ಟಿನ ಹೊಸ ಭರವಸೆಯನ್ನು ಮೂಡಿಸಿದ್ದಾರೆ.