ಸಾರಾಂಶ
ಉಡುಪಿ ನಗರದ ಅಂಗಡಿ ಮುಂಗಟ್ಟು, ಶೋರೂಂ, ಹೊಟೇಲ್‌ಗಳು ಮತ್ತು ಶಾಲಾ ಕಾಲೇಜುಗಳ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆ ಮಾಡಬೇಕು. ಒಂದು ತಿಂಗಳ ಗಡುವು ನೀಡಿದ್ದು, ಬಳಿಕ ಅಂತಹ ಫಲಕಗಳಿಗೆ ಮಸಿ ಬಳಿಯುವ ಕೆಲಸ ಮಾಡುತ್ತೇವೆ ಎಂದು ಕರ್ನಾಟಕ ಯುವರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ನಗರದ ಅಂಗಡಿ ಮುಂಗಟ್ಟು, ಶೋರೂಂ, ಹೊಟೇಲ್‌ಗಳು ಮತ್ತು ಶಾಲಾ ಕಾಲೇಜುಗಳ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆ ಮಾಡಬೇಕು. ಒಂದು ತಿಂಗಳ ಗಡುವು ನೀಡುತ್ತೇವೆ. ಆ ಬಳಿಕವೂ ಅಳವಡಿಕೆ ಮಾಡದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ, ಅಂತಹ ಫಲಕಗಳಿಗೆ ಮಸಿ ಬಳಿಯುವ ಕೆಲಸ ಮಾಡುತ್ತೇವೆ ಎಂದು ಕರ್ನಾಟಕ ಯುವರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಯುವರಕ್ಷಣಾ ವೇದಿಕೆಯ ರಾಜ್ಯ ಪ್ರಚಾರ ಸಮಿತಿ ಕಾರ್ಯದರ್ಶಿ ಸಂದೀಪ್ ಮಾತನಾಡಿ, ರಾಜ್ಯ ಸರ್ಕಾರ ಕನ್ನಡ ಭಾಷೆ ಅಳವಡಿಸಲು ಆದೇಶ ಮಾಡಿದರೂ ಸಹ ಜಿಲ್ಲೆಯ ವಿವಿಧೆಡೆ ಇನ್ನೂ ಕೂಡ ಪಾಲನೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಫೆ. 24ರಂದು ಕರ್ನಾಟಕ ಯುವರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಡಾ. ಸುನಿಲ್ ಎಂ.ಎಸ್. ನೇತೃತ್ವದಲ್ಲಿ ಜಿಲ್ಲಾ ಯುವ ಘಟಕದ ವತಿಯಿಂದ ಪ್ರವಾಸಿ ಮಂದಿರದಿಂದ ಬ್ರಹ್ಮಗಿರಿ, ಅಜ್ಜರಕಾಡು ಮಾರ್ಗವಾಗಿ ಕಾಲ್ನಡಿಗೆಯಲ್ಲಿ ತೆರಳಿ ನಗರಸಭೆ ಅಧ್ಯಕ್ಷರು, ಪೌರಾಯುಕ್ತರಿಗೆ ಹಾಗೂ ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗೆ ಮನವಿ ನೀಡಲಾಗುವುದು.ಒಂದು ತಿಂಗಳೊಳಗೆ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡಬೇಕು. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ, ನಾಮಫಲಕಗಳಿಗೆ ಮಸಿ ಬಳಿಯುವ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್, ಪ್ರಮುಖರಾದ ನಾಗೇಶ್, ಉಮೇಶ್ ಶೆಟ್ಟಿ, ರಾಜು ಇದ್ದರು.