ಪುತ್ತೂರು ಪೌರ ಸನ್ಮಾನ ಸಮಿತಿ ಪುತ್ತೂರು ವತಿಯಿಂದ ಭಾವಿ ಪರ್ಯಾಯ ಪೀಠಾಧೀಶ ಶಿರೂರು ಮಠದ ಶ್ರೀ ವೇದವರ್ಧನ ಸ್ವಾಮೀಜಿ ಅವರಿಗೆ ಅದ್ಧೂರಿ ಸ್ವಾಗತ ಹಾಗೂ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ದೇವರಮಾರು ಗದ್ದೆಯಲ್ಲಿ ನೀಡಲಾದ ಪೌರ ಸನ್ಮಾನ
ಭಾವಿ ಪರ್ಯಾಯ ಪೀಠಾಧೀಶ ಶೀರೂರು ಶ್ರೀಗಳಿಗೆ ಪುತ್ತೂರಿನಲ್ಲಿ ಪೌರ ಸನ್ಮಾನ ಕನ್ನಡಪ್ರಭ ವಾರ್ತೆ ಪುತ್ತೂರು
ಪರ್ಯಾಯ ಎಂದರೆ ಕೇವಲ ಪೂಜೆಯಲ್ಲ. ರಾಜಸೂಯ ಯಾಗ, ಅಶ್ವಮೇಧ ಯಾಗದ ಕಲ್ಪನೆ. ಎಲ್ಲಾ ತೀರ್ಥ ಕ್ಷೇತ್ರಗಳ ದರ್ಶನ ಮಾಡಿ ಪುಣ್ಯ ಸಂಪಾದನೆ ಮಾಡಿ ಭಕ್ತರನ್ನು ಕರೆದುಕೊಂಡು ಹೋಗಿ ಪರ್ಯಾಯದಲ್ಲಿ ಕುಳಿತುಕೊಳ್ಳುವುದಾಗಿದೆ ಎಂದು ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೀಠಾರೋಹಣ ಮಾಡಲಿರುವ ಶೀರೂರು ಮಠದ ಶ್ರೀ ವೇದವರ್ಧನ ಸ್ವಾಮೀಜಿ ಹೇಳಿದ್ದಾರೆ. ಪುತ್ತೂರು ಪೌರ ಸನ್ಮಾನ ಸಮಿತಿ ಪುತ್ತೂರು ವತಿಯಿಂದ ಭಾವಿ ಪರ್ಯಾಯ ಪೀಠಾಧೀಶ ಶಿರೂರು ಮಠದ ಶ್ರೀ ವೇದವರ್ಧನ ಸ್ವಾಮೀಜಿ ಅವರಿಗೆ ಅದ್ಧೂರಿ ಸ್ವಾಗತ ಹಾಗೂ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ದೇವರಮಾರು ಗದ್ದೆಯಲ್ಲಿ ನೀಡಲಾದ ಪೌರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಎಲ್ಲರೂ ಪರ್ಯಾಯಕ್ಕೆ ಬಂದು ೧೦ ದಿನ ಅಲ್ಲೇ ಇದ್ದು ಪರ್ಯಾಯದಲ್ಲಿ ಭಾಗಿಗಳಾಗಬೇಕು. ಎಲ್ಲೆಲ್ಲೋ ಪ್ರವಾಸಕ್ಕೆ ಹೋಗುವ ಬದಲು ಉಡುಪಿಗೆ ಬಂದು ಕೃಷ್ಣನ ಸೇವೆ ಮಾಡಿ ಪರ್ಯಾಯ ಪೂರ್ಣಗೊಳಿಸಬೇಕು ಎಂದರು.ಗುರುವಂದನೆ ಮಾಡಿದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಮಾತನಾಡಿ, ಶ್ರೀಕೃಷ್ಣ ಪೂಜೆ ನೆರವೇರಿಸಲಿರುವ ಗುರುಗಳು ಸರ್ವಜ್ಞ ಪೀಠ ಏರುವ ಮೊದಲು ದಿಗ್ವಿಜಯ ಮಾಡುವುದು ಸಂಪ್ರದಾಯ. ಪುರಪ್ರವೇಶ ಆದ ಬಳಿಕ ಸ್ವಾಗತ ನೀಡಿ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತದೆ ಎಂದರು.ಕೇರಳಲ್ಲಿ ಚುನಾವಣೆಯಲ್ಲಿ ಗೆದ್ದ ಅನ್ಯಮತದವರು ಸುಪ್ರಭಾತವನ್ನು ನಿಲ್ಲಿಸಲು ಮುಂದಾಗಿದ್ದು ಇದು ಮುಂದೆ ದೇಶದಾದ್ಯಂತ ವ್ಯಾಪಿಸುವ ಸಾಧ್ಯತೆಯಿರುವುದರಿಂದ ಜಾಗರೂಕರಾಗಿರಬೇಕು. ಧರ್ಮ ಎಂದಾಗ ನಾವೆಲ್ಲರೂ ಹಿಂದು ಸಮಾಜದ ಸಂಸ್ಕಾರ, ಸಂಸ್ಕೃತಿ ಉಳಿಸಲು ಸೈನಿಕ ಎಂಬ ಭಾವನೆಯೊಂದಿಗೆ ಇಂತಹ ಗುರುಗಳ ಮಾರ್ಗದರ್ಶನ ಪಡೆದು ಮುಂದುವರಿಯಬೇಕು ಎಂದು ಹೇಳಿದರು.
ಪೌರ ಸನ್ಮಾನ ಸಮಿತಿ ಗೌರವಾಧ್ಯಕ್ಷ ಡಾ. ಸುರೇಶ್ ಪುತ್ತೂರಾಯ ಅಧ್ಯಕ್ಷತೆ ವಹಿಸಿದ್ದರು. ಉಡುಪಿಯಿಂದ ಆಗಮಿಸಿದ ಸ್ವಾಮೀಜಿ ಅವರನ್ನು ದರ್ಬೆ ವೃತ್ತದ ಬಳಿ ತುಳಸಿ ಹಾರಾರ್ಪಣೆ ಮಾಡಿ ಸ್ವಾಗತಿಸಲಾಯಿತು. ಅಲ್ಲಿಂದ ತೆರೆದ ವಾಹನದ ಮೂಲಕ ಭವ್ಯ ಶೋಭಾಯಾತ್ರೆಯೊಂದಿಗೆ ದೇವಸ್ಥಾನದ ದೇವರಮಾರು ಗದ್ದೆಗೆ ಕರೆತರಲಾಯಿತು. ಮಾಜಿ ಶಾಸಕ ಸಂಜೀವ ಮಠಂದೂರು, ಪೌರ ಸನ್ಮಾನ ಸಮಿತಿ ಗೌರವಾಧ್ಯಕ್ಷ ಯು. ಪೂವಪ್ಪ, ನಗರಸಭಾ ಮಾಜಿ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ರೈ ಬೆಳ್ಳಿಪ್ಪಾಡಿ, ಪೌರ ಸನ್ಮಾನ ಸಮಿತಿ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು ಮತ್ತಿತರರಿದ್ದರು.ಸ್ವಾಗತ ಸಮಿತಿಯ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು. ಪೌರ ಸನ್ಮಾನ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ದಂಪತಿ ಸ್ವಾಮೀಜಿಗೆ ಫಲಪುಷ್ಪ ನೀಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪುತ್ತೂರು ಉಮೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಚಾಲಕ ರವಿಕುಮಾರ್ ರೈ ಕೆದಂಬಾಡಿ ಸನ್ಮಾನ ಪತ್ರ ವಾಚಿಸಿದರು. ಹರಿಪ್ರಸಾದ್ ಯಾದವ್ ವಂದಿಸಿದರು. ಶಿವಪ್ರಸಾದ್ ತಲೆಪ್ಪಾಡಿ ನಿರ್ವಹಿಸಿದರು.