ಉಡುಪಿ: ಇಂದಿನಿಂದ ಮೂರು ದಿನ ರೆಡ್ ಅಲರ್ಟ್ ಘೋಷಣೆ

| Published : Jul 24 2025, 12:45 AM IST

ಸಾರಾಂಶ

ಇನ್ನೂ ಒಂದು ವಾರ ಕಾಲ ಜಿಲ್ಲೆಯಲ್ಲಿ ಧಾರಾಕಾರ ಮಳ‍ೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಂತೆ ಉಡುಪಿ ಜಿಲ್ಲಾಡಳಿತ ಗುರುವಾರದಿಂದ ಮೂರು ದಿನಗಳ ಕಾಲ ರೆಡ್‌ ಅಲರ್ಟ್ ಘೋಷಿಸಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲಾದ್ಯಂತ ಮಂಗಳವಾರ ರಾತ್ರಿ ಮತ್ತು ಬುಧವಾರ ದಿನ ಇಡೀ ಎಡೆಬಿಡದೆ ಮಳೆಯಾಗಿದೆ. ಇನ್ನೂ ಒಂದು ವಾರ ಕಾಲ ಜಿಲ್ಲೆಯಲ್ಲಿ ಧಾರಾಕಾರ ಮಳ‍ೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಂತೆ ಉಡುಪಿ ಜಿಲ್ಲಾಡಳಿತ ಗುರುವಾರದಿಂದ ಮೂರು ದಿನಗಳ ಕಾಲ ರೆಡ್‌ ಅಲರ್ಟ್ ಘೋಷಿಸಿದೆ.

ಜಿಲ್ಲೆಯಲ್ಲಿ ಬುಧವಾರ ಉತ್ತಮ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಆದರೆ ಅದನ್ನು ಮೀರಿ ಭಾರಿ ಮಳೆಯಾಗಿದೆ. ಮಧ್ಯಾಹ್ನದ ನಂತರ ಬಿಡದೆ ಮಳೆ ಸುರಿದಿದೆ. ಇದು ಮುಂದುವರಿದರೆ ನದಿ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ಏರಿಕೆಯಾಗಲಿದ್ದು, ಈ ಪ್ರದೇಶದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ನದಿ ತೀರದ ಜನರು ಮತ್ತು ಮೀನುಗಾರರು ಮುಂಜಾಗ್ರತೆ ವಹಿಸುವಂತೆ, ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಸೂಕ್ತ ವಿಕೋಪ ನಿರ್ವಹಣೆಗೆ ಸನ್ನದ್ಧರಾಗಿರುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕಳೆದ 24 ಗಂಟೆಗಳಲ್ಲಿ ಸುರಿದ ಮಳೆಗೆ ಉಡುಪಿ ಜಿಲ್ಲೆಯಲ್ಲಿ 2 ಮನೆಗಳಿಗೆ ಹಾನಿಯಾಗಿದೆ. ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ನಾಗೇಶ ಅವರ ಮನೆ ಮಳೆಯಿಂದ ಭಾಗಶಃ ಹಾನಿ 20,000 ರು. ಮತ್ತು ಕಾಪು ತಾಲೂಕಿನ ಹೇರೂರು ಗ್ರಾಮದ ಪ್ರೇಮ ಆಚಾರಿ ಅವರ ಮನೆಗೆ 50,000 ರು. ನಷ್ಟವಾಗಿದೆ.

ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 51 ಮಿ.ಮೀ. ಮಳೆಯಾಗಿದೆ. ತಾಲೂಕುವಾರು: ಕಾರ್ಕಳ 45.40, ಕುಂದಾಪುರ 59.80, ಉಡುಪಿ 33.40, ಬೈಂದೂರು 61.40 ಮಿ. ಮೀ., ಬ್ಮಹ್ಮಾವರ 43 ಮಿ.ಮೀ. ಹೆಬ್ರಿ 50.2 ಮಿ.ಮೀ., ಕಾಪು 47.6 ಮಿ.ಮೀ. ಮಳೆಯಾಗಿದೆ.