ಉಡುಪಿ: 12ರಂದು ‘ಸಂಜೀವ ಯಕ್ಷ ಜೀವ - ಭಾವ’

| Published : Sep 10 2025, 01:04 AM IST

ಸಾರಾಂಶ

ಅಂದು ಮಧ್ಯಾಹ್ನ 3 ಗಂಟೆಗೆ ಯಕ್ಷ ಸಂಘಟಕ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಮಣಿಪಾಲದ ಖ್ಯಾತ ಪ್ರಸೂತಿ ತಜ್ಞೆ ಡಾ.ಗಿರಿಜಾ ಅಧ್ಯಕ್ಷತೆ ವಹಿಸುವರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು

ಕನ್ನಡಪ್ರಭ ವಾರ್ತೆ ಉಡುಪಿ

ಸಾವಿರಾರು ವಿದ್ಯಾರ್ಥಿಗಳಿಗೆ ಪಾರಂಪರಿಕ ಯಕ್ಷಗಾನವನ್ನು ಕಲಿಸಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರ ಜೀವನ - ಸಾಧನೆ ಬಗ್ಗೆ ವಿಚಾರಗೋಷ್ಠಿಯನ್ನೊಳಗೊಂಡ ‘ಸಂಜೀವ ಯಕ್ಷ ಜೀವ - ಭಾವ’ ಎಂಬ ಕಾರ್ಯಕ್ರಮ ಸೆ.12ರಂದು ತಿಂಗಳೆ ಪ್ರತಿಷ್ಠಾನ ಹಾಗೂ ಸಂಜೀವ ಶಿಷ್ಯ ವೃಂದದ ಸಹಯೋಗದಲ್ಲಿ ಯಕ್ಷಗಾನ ಕಲಾರಂಗ ಇನ್ಫೋಸೀಸ್ ಪ್ರತಿಷ್ಠಾನ ಸಭಾಂಗಣದಲ್ಲಿ ನಡೆಯಲಿದೆ ಎಂದು ತಿಂಗಳೆ ಪ್ರತಿಷ್ಠಾನದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಮಧ್ಯಾಹ್ನ 3 ಗಂಟೆಗೆ ಯಕ್ಷ ಸಂಘಟಕ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಮಣಿಪಾಲದ ಖ್ಯಾತ ಪ್ರಸೂತಿ ತಜ್ಞೆ ಡಾ.ಗಿರಿಜಾ ಅಧ್ಯಕ್ಷತೆ ವಹಿಸುವರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಹೇಳಿದರು.ಮಧ್ಯಾಹ್ನ 3.30ರಿಂದ 3.45ರ ವರೆಗೆ ಗುರು ಬನ್ನಂಜೆ ಸಂಜೀವ ಸುವರ್ಣರಿಂದ ಪಾರಂಪರಿಕ ಯಕ್ಷಗಾನ ನೃತ್ಯಪ್ರದರ್ಶನ ನಡೆಯಲಿದೆ. 3.45ರಿಂದ ‘ನಮ್ಮ ಸಂಜೀವ’ ವಿಷಯದ ಕುರಿತು ವಿಚಾರಗೋಷ್ಠಿಯೊಂದು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ, ಖ್ಯಾತ ಮೂಳೆತಜ್ಞ ಡಾ.ಭಾಸ್ಕರಾನಂದ ಕುಮಾರ್, ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಯಕ್ಷ ಭಾಗವತ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಇವರು ಸಂಜೀವರ ಕುರಿತು ಮಾತನಾಡಲಿದ್ದಾರೆ ಎಂದರು.ಸಂಜೆ 5ರಿಂದ ಸಮಾರೋಪ ಸಮಾರಂಭ ಹಾಗೂ ಗುರುವಂದನೆ ಮಾಜಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್‌ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಬಿಎಂಪಿ ಅಪರ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಹಾಗೂ ಮಂಗಳೂರಿನ ಹೃದಯತಜ್ಞ ಡಾ.ಎಚ್. ನರೇಶ್‌ಚಂದ್ರ ಹೆಗ್ಡೆ ಅತಿಥಿಗಳಾಗಿ ಉಪಸ್ಥಿತರಿರುವರು.ಸಂಜೆ 6ರಿಂದ ಬನ್ನಂಜೆ ಸಂಜೀವ ಸುವರ್ಣರ ವಿದ್ಯಾರ್ಥಿಗಳಿಂದ ‘ಕತೆಯಾದಳು ಕಾಶಿ ಕುವರಿ’ (ಭೀಷ್ಮ ವಿಜಯ) ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ಕಿರಣ್‌ ಕುಮಾರ್, ನ್ಯಾಯವಾದಿ ಕರ್ಜೆ ಬಾಲಕೃಷ್ಣ ಶೆಟ್ಟಿ ಹಾಗೂ ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.