ಸಾರಾಂಶ
ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಂಹಿತಾ ಸಿದ್ಧಾಂತ ಹಾಗೂ ಸಂಸ್ಕೃತ ವಿಭಾಗ ‘ಆಯುರ್ ದಿಗ್ದರ್ಶಿ- 2025’ ಎಂಬ ರಾಜ್ಯಮಟ್ಟದ ಮಾರ್ಗದರ್ಶಿ ಆಯುರ್ವೇದ ಸಮ್ಮೇಳನವನ್ನು ಬಿಎಎಂಎಸ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿತ್ತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಂಹಿತಾ ಸಿದ್ಧಾಂತ ಹಾಗೂ ಸಂಸ್ಕೃತ ವಿಭಾಗ ‘ಆಯುರ್ ದಿಗ್ದರ್ಶಿ- 2025’ ಎಂಬ ರಾಜ್ಯಮಟ್ಟದ ಮಾರ್ಗದರ್ಶಿ ಆಯುರ್ವೇದ ಸಮ್ಮೇಳನವನ್ನು ಬಿಎಎಂಎಸ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿತ್ತು.ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ., ಬಿಎಎಂಎಸ್ ನಂತರ ವಿದ್ಯಾರ್ಥಿಗಳಿಗಿರುವ ಅವಕಾಶಗಳನ್ನು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಸ್ತುತಪಡಿಸಿದರು.ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್., ಆಯುರ್ವೇದ ವೈದ್ಯರಲ್ಲಿರಬೇಕಾದ ಗುಣಲಕ್ಷಣಗಳ ಕುರಿತು ಮಾತನಾಡಿದರು. ಪ್ರಧಾನ ಸಂಪನ್ಮೂಲ ವ್ಯಕ್ತಿ ವಿಜಯಪುರದ ಪವಮಾನ ಆಯುರ್ವೇದ ಫಾರ್ಮಸಿಯ ಸ್ಥಾಪಕ ಡಾ. ಶ್ರೀನಿವಾಸ ಒಡೆಯರ್, ವೈದ್ಯಕೀಯ ವೃತ್ತಿಯಲ್ಲಿ ಆಯುರ್ವೇದ ಶಾಸ್ತ್ರದ ಆಳವಾದ ಅಧ್ಯಯನದ ಅಗತ್ಯವನ್ನು ನೈಜ ರೋಗಿಗಳ ಉದಾಹರಣೆಗಳ ಮೂಲಕ ವಿಸ್ತಾರವಾಗಿ ಮನವರಿಕೆ ಮಾಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಉಡುಪಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ರೋಗನಿದಾನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಅರುಣ್ ಕುಮಾರ್, ಬಿಎಎಂಎಸ್ ನಂತರದ ವಿಫುಲವಾದ ಅವಕಾಶಗಳನ್ನು ಮನೋಜ್ಞವಾಗಿ ವಿಶದಪಡಿಸಿದರು.ಸಂಹಿತಾ ಸಿದ್ಧಾಂತ ವಿಭಾಗಾಧ್ಯಕ್ಷೆ ಡಾ. ವಿದ್ಯಾಲಕ್ಷ್ಮೀ ಕೆ., ಶಾಸ್ತ್ರಾಧ್ಯಯನದ ಅಗತ್ಯವನ್ನು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ವಿವರಿಸಿದರು. ಸಮ್ಮೇಳನದ ಮುಖ್ಯ ಸಂಘಟನಾ ಕಾರ್ಯದರ್ಶಿ ಡಾ. ಅರ್ಹಂತ್ ಕುಮಾರ್ ವಂದಿಸಿದರು.ರಾಜ್ಯದ ವಿವಿಧ ಆಯುರ್ವೇದ ಕಾಲೇಜುಗಳಿಂದ ಆಗಮಿಸಿದ ೧೫೦ರಷ್ಟು ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಮಹತ್ವದ ಅವಕಾಶಗಳ ಕುರಿತು ಜ್ಞಾನ ಪಡೆದುಕೊಂಡರು. ಸಂಹಿತಾ ಸಿದ್ಧಾಂತ ವಿಭಾಗದ ಪ್ರಾಧ್ಯಾಪಕ ಸುಬ್ರಹ್ಮಣ್ಯ ಭಟ್, ಸಹಪ್ರಾಧ್ಯಾಪಕಿ ಡಾ. ಲಿಖಿತಾ ಡಿ.ಎನ್., ಸಹಾಯಕ ಪ್ರಾಧ್ಯಾಪಕಿಯರಾದ ಡಾ. ಮಹಾಲಕ್ಷ್ಮೀ ಎಂ.ಎಸ್., ಡಾ. ಧನಶ್ರೀ ಪಾಟೀಲ್ ಹಾಗೂ ಇತರ ಉಪನ್ಯಾಸಕ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.