ಶ್ರೀಕೃಷ್ಣ ಮಂತ್ರ ಲೇಖನ ಯಜ್ಞವನ್ನು ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಉಡುಪಿ: ಶ್ರೀಕೃಷ್ಣ ಮಂತ್ರ ಲೇಖನ ಯಜ್ಞವನ್ನು ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಯಾವುದೇ ಒಂದು ಪಾಠವನ್ನು ಅಥವಾ ಜಪವನ್ನು ಕೇವಲ ಬಾಯಲ್ಲಿ ಹೇಳಿದರೆ ಅದು ಪೂರ್ತಿ ಮನಸ್ಸಿನಲ್ಲಿ ನಿಲ್ಲದೇ ಹೋಗಬಹುದು. ಅದಕ್ಕೋಸ್ಕರ ಪುನರಪಿ ಬರೆಯುತ್ತಾ ಇದ್ದರೆ ಅದು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ನಿಲ್ಲುತ್ತದೆ. ಅದಕ್ಕೋಸ್ಕರ ಶ್ರೀಕೃಷ್ಣ ಮಂತ್ರವನ್ನು ಪುಸ್ತಕದಲ್ಲಿ ಬರೆದರೆ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಈ ಯಜ್ಞವನ್ನು ಪ್ರಾರಂಭಿಸಿದ್ದೇವೆ. ನಾಡಿನ ಎಲ್ಲ ಜನರು ಲೇಖನ ಯಜ್ಞದಲ್ಲಿ ಪಾಲ್ಗೊಂಡು ದೇವರ ಅನುಗ್ರಹ ಪಡೆಯಬೇಕು ಎಂದು ಶ್ರೀಗಳು ಆಶೀರ್ವಚನ ನೀಡಿದರು.ಬೆಂಗಳೂರಿನ ಇಸ್ಕಾನ್‌ನ ಹಿರಿಯ ಉಪಾಧ್ಯಕ್ಷ ಶ್ರೀ ಚಂಚಲಪತಿ ದಾಸರು ಲೇಖನ ಹೊತ್ತಿಗೆಯನ್ನು ಉದ್ಘಾಟಿಸಿ, ಕೃಷ್ಣ ಮಂತ್ರ ಜಪದ ಮಹಿಮೆಯನ್ನು ವರ್ಣಿಸಿದರು.ಬೆಂಗಳೂರಿನ ವಿದ್ಯಾ ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ಮಹಾ ಮಹೋಪಾಧ್ಯಾಯ ವಿದ್ವಾನ್ ಹರಿದಾಸ ಭಟ್ಟರು, ಕಲಿಯುಗದಲ್ಲಿ ಕೃಷ್ಣ ಮಂತ್ರದ ಮಹಿಮೆ ಮತ್ತು ಅದರಿಂದ ಆಗುವ ಪ್ರಯೋಜನವನ್ನು ವಿವರಿಸಿದರು.ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹಾಗೂ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅಭ್ಯಾಗತರಾಗಿ ಭಾಗವಹಿಸಿದ್ದರು. ಶೀರೂರು ಮಠದ ದಿವಾನರಾದ ಡಾ. ಉದಯ ಕುಮಾರ್ ಸರಳತ್ತಾಯರು ಸ್ವಾಗತಿಸಿದರು. ಆಸ್ಥಾನ ವಿದ್ವಾಂಸರಾದ ಆನಂದತೀರ್ಥ ಆಚಾರ್ಯ ನಿರೂಪಿಸಿದರು.