ಸಾರಾಂಶ
ಜಿಲ್ಲೆಯಲ್ಲಿ ೩೧೫೩ ಮಂದಿಗೆ ೫೩.೬೫ ಕೋಟಿ ರು. ಲಕ್ಷ ಸಾಲ ವಿತರಣೆ: ಸಂಸದ
ಕನ್ನಡಪ್ರಭ ವಾರ್ತೆ ಕಂದಾಪುರವಿಶ್ವಕರ್ಮ ಯೋಜನೆಯಡಿ ೫೩.65 ಕೋಟಿ ರು. ಸಾಲ ವಿತರಿಸುವ ಮೂಲಕ ಉಡುಪಿ ಜಿಲ್ಲೆ ಈ ಯೋಜನೆಯಡಿ ರಾಜ್ಯದಲ್ಲಿ 3ನೇ ಸ್ಥಾನದಲ್ಲಿದೆ ಎಂದು ಉಡಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಬ್ರಹ್ಮಾವರ ತಾಲೂಕಿನ ಕೋಟ ಅಂಚೆ ಕಚೇರಿಯ ಆವರಣದಲ್ಲಿ ಈ ಯೋಜನೆಯಡಿ ನಡೆದ ಸಲಕರಣೆ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಒಟ್ಟು ೬,೮೯೦ ಫಲಾನುಭವಿಗಳು ವಿಶ್ವಕರ್ಮ ಯೋಜನೆಗೆ ಆಯ್ಕೆಯಾಗಿದ್ದು, ಅವರ ಪೈಕಿ ೬,೧೨೯ ಮಂದಿಗೆ ಅವರ ಆಯ್ಕೆಯ ಉದ್ಯೋಗದಲ್ಲಿ ತರಬೇತಿ ನೀಡಲಾಗಿದೆ. ಅವರಲ್ಲಿ ೩೧೫೩ ಮಂದಿಗೆ ಸ್ವದ್ಯೋಗ ಕೈಗೊಳ್ಳಲು ೫೩.೬೫ ಕೋಟಿ ರು. ಸಾಲ ಒದಗಿಸಲಾಗಿದೆ. ಯೋಜನೆಗೆ ಆಯ್ಕೆಯಾದವರ ಪೈಕಿ ಇನ್ನೂ ೭೧೩ ಜನರಿಗೆ ತರಬೇತಿ ನೀಡಬೇಕಾಗಿದೆ ಎಂದವರು ಹೇಳಿದರು.ಮುಂದಿನ ದಿನಗಳಲ್ಲಿ ಆಯ ಗ್ರಾಮ ಪಂಚಾಯಿತಿಗಳಲ್ಲಿ ಅಂಚೆ ಕಚೇರಿಯ ಮೂಲಕ ವಿಶ್ವಕರ್ಮ ಯೋಜನೆಯ ಸವಲತ್ತುಗಳ ವಿತರಣೆ ಕಾರ್ಯಕ್ರಮ ನಡೆಸಲಾಗುವುದು ಎಂದವರು ಪ್ರಕಟಿಸಿದರು.ಸ್ಥಳೀಯ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ವಿಶ್ವಕರ್ಮ ಯೋಜನೆಯಲ್ಲಿ ವಿತರಿಸಿದ ಸವಲತ್ತಿನ ಕಿಟ್‌ಗಳು ಉತ್ತಮ ಗುಣಮಟ್ಟದ್ದಾಗಿದ್ದು, ಈ ಯೋಜನೆ ಫಲಪ್ರದವಾದರೆ ಕುಶಲಕರ್ಮಿಗಳಿಗೆ ಅನುಕೂಲವಾಗಲಿದೆ. ಆದ್ದರಿಂದ ಫಲಾನುಭವಿಗಳು ಇದರ ಸದುಪಯೋಗ ಪಡೆಯಬೇಕು ಎಂದರು.
ಸಭೆಯಲ್ಲಿ ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್, ಉಪಾಧ್ಯಕ್ಷ ಪಾಂಡು ಪೂಜಾರಿ, ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಬಾರಿಕೆರೆ ಮತ್ತು ಅಂಚೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.