ಸಾರಾಂಶ
ಭಾರತೀಯ ವೈದ್ಯಕೀಯ ಸಂಘದ ಕರೆಯಂತೆ ಸಂಘದಲ್ಲಿ ನೊಂದಾಯಿತ ಸುಮಾರು 550 ಮಂದಿ ವೈದ್ಯರು ಶನಿವಾರ ಬೆಳಗ್ಗೆ 6ರಿಂದ ಭಾನುವಾರ ಬೆಳಗ್ಗೆ 6ರ ವರೆಗೆ ತಮ್ಮ ಕ್ಲಿನಿಕ್ ಮತ್ತು ಆಸ್ಪತ್ರೆಗಳನ್ನು ಮುಚ್ಚಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಕೊಲ್ಕತ್ತಾದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿಯ ಅತ್ಯಾಚಾರ ಕೊಲೆ ಪ್ರಕರಣವನ್ನು ಖಂಡಿಸಿ ಉಡುಪಿ ಜಿಲ್ಲಾದ್ಯಂತ ಖಾಸಗಿ ವೈದ್ಯರು ಶನಿವಾರ ಒಂದು ದಿನ ತಮ್ಮ ಚಿಕಿತ್ಸಾಲಯಗಳನ್ನು ಮುಚ್ಚಿ ಮುಷ್ಕರ ನಡೆಸಿದರು.ಭಾರತೀಯ ವೈದ್ಯಕೀಯ ಸಂಘದ ಕರೆಯಂತೆ ಸಂಘದಲ್ಲಿ ನೊಂದಾಯಿತ ಸುಮಾರು 550 ಮಂದಿ ವೈದ್ಯರು ಶನಿವಾರ ಬೆಳಗ್ಗೆ 6ರಿಂದ ಭಾನುವಾರ ಬೆಳಗ್ಗೆ 6ರ ವರೆಗೆ ತಮ್ಮ ಕ್ಲಿನಿಕ್ ಮತ್ತು ಆಸ್ಪತ್ರೆಗಳನ್ನು ಮುಚ್ಚಿದ್ದಾರೆ. ಆದರೆ ತುರ್ತು ಪ್ರಕರಣಗಳಲ್ಲಿ ವೈದ್ಯಕೀಯ ಸೇವೆ ನೀಡಿದ್ದಾರೆ. ಈ ಮುಷ್ಕರಕ್ಕೆ ಜಿಲ್ಲೆಯ ದಂತ ವೈದ್ಯರ ಸಂಘದ 125 ವೈದ್ಯರೂ ಕೂಡ ಬೆಂಬಲ ನೀಡಿದ್ದು, ತಮ್ಮ ಕ್ಲಿನಿಕ್‌ಗಳನ್ನು ಕೂಡ ಮುಚ್ಚಿದ್ದಾರೆ.
ಜಿಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಕೂಡ ಮುಷ್ಕರಕ್ಕೆ ಬೆಂಬಲ ನೀಡಿದ್ದರೂ, ಆಸ್ಪತ್ರೆಗೆ ಬಂದ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಇದರಿಂದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆಯಾಗಿಲ್ಲ.ಆದರೆ ಮುಷ್ಕರದ ಬಗ್ಗೆ ಮೊದಲೇ ಪ್ರಕಟಿಸಿದ್ದರಿಂದ ಶನಿವಾರ ಖಾಸಗಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕಡಿಮೆ ಇದ್ದರೂ, ಸಾಕಷ್ಟು ಮಂದಿ ಸಣ್ಣಪುಟ್ಟ ಅನಾರೋಗ್ಯಕ್ಕೆ ಬಂದವರಿಗೆ ಚಿಕಿತ್ಸೆ ದೊರಯದೇ ಹಿಂದಕ್ಕೆ ತೆರಳುವಂತಾಯಿತು. ಅಪಘಾತ, ಗಾಯ, ಹೆರಿಗೆ ಇತ್ಯಾದಿ ಪ್ರಕರಣಗಳಲ್ಲಿ ವೈದ್ಯರು ತಕ್ಷಣ ಸ್ಪಂದಿಸಿ ಚಿಕಿತ್ಸೆ ನೀಡಿದ್ದಾರೆ.
ಜಿಲ್ಲೆಯ ಪ್ರಮುಖ ಆಸ್ಪತ್ರೆ ಕೆಎಂಸಿ ಮಣಿಪಾಲ ಕೂಡ ವೈದ್ಯರ ಈ ಮುಷ್ಕರಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿದೆ, ಇಲ್ಲಿನ ಹೊರರೋಗಿಗಳ ವಿಭಾಗವನ್ನು ಮುಚ್ಚಲಾಗಿತ್ತು. ಆಸ್ಪತ್ರೆಯ ಒಳರೋಗಿಗಳಿಗೆ ಮತ್ತು ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲಾಗಿದೆ.