ಸಾರಾಂಶ
ಉಡುಪಿ : ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಂಸದ ತೇಜಸ್ವಿಸೂರ್ಯ, ಪತ್ನಿ ಶಿವಶ್ರೀ ಮತ್ತು ಕುಟುಂಬ ಸಮೇತರಾಗಿ ಉಡುಪಿಗೆ ಆಗಮಿಸಿ ಶನಿವಾರ ಸಂಜೆ ಶ್ರೀಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆದುಕೊಂಡರು.
ಸಂಜೆ ಕೃಷ್ಣಮಠಕ್ಕೆ ಆಗಮಿಸಿದ ತೇಜಸ್ವಿ ದಂಪತಿಯನ್ನು ಶ್ರೀಮಠದ ಅಧಿಕಾರಿಗಳು ಸ್ವಾಗತಿಸಿದರು.ನಂತರ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಹಾಗೂ ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥರನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆದುಕೊಂಡರು.ರಾತ್ರಿ ಶ್ರೀಪಾದರ ಅಪೇಕ್ಷೆಯಂತೆ ತೇಜಸ್ವಿಸೂರ್ಯ ಅವರು ಪರಿವಾರದ ಜೊತೆಗೆ ಶ್ರೀಕೃಷ್ಣನ ರಥೋತ್ಸವದಲ್ಲಿ ಪಾಲ್ಗೊಂಡು ನೆರೆದ ಭಕ್ತ ಜನರೊಡನೆ ಬ್ರಹ್ಮರಥವನ್ನು ಎಳೆದು ಸಂಭ್ರಮಿಸಿದರು.
ರಾತ್ರಿಯ ತೊಟ್ಟಿಲ ಪೂಜೆಯ ಸಂದರ್ಭದಲ್ಲಿ ನಡೆದ ಅಷ್ಟಾವಧಾನ ಸೇವೆಯಲ್ಲಿ ಶಿವಶ್ರೀ ತೇಜಸ್ವಿ ಅವರು ಸುಶ್ರಾವ್ಯವಾಗಿ ನಾಮಸಂಕೀರ್ತನೆ ಮಾಡಿದರು. ತೇಜಸ್ವಿಯವರು ಕ್ರಮಬದ್ಧವಾಗಿ ವೇದಘೋಷ ಸೇವೆಯನ್ನು ಮಾಡಿದರು.ಈ ಸಂದರ್ಭ ಪರ್ಯಾಯ ಶ್ರೀಪಾದರು, ಯುವ ಜನತೆಗೆ ತೇಜಸ್ವಿ, ಸ್ಫೂರ್ತಿದಾಯಕರಾಗಿ ನಾಯಕರಾಗಿ ಹೊರಹೊಮ್ಮಿದ್ದಾರೆ.
ಗುರು ಹಿರಿಯರ ಆಶೀರ್ವಾದ ಮತ್ತು ದೇವಬಲದಿಂದ ಇದು ಲಭಿಸಿದೆ. ಶ್ರೀಕೃಷ್ಣ ಮುಖ್ಯಪ್ರಾಣರ ಆಶೀರ್ವಾದದಿಂದ ಇವರ ನಾಯಕತ್ವದಲ್ಲಿ ಅನೇಕ ಸತ್ಕಾರ್ಯಗಳು ನಡೆಯಲಿ ಎಂದು ದಂಪತಿಯನ್ನು ಹರಸಿ ಅನುಗ್ರಹಿಸಿದರು.ಜೊತೆಗೆ ಆಗಮಿಸಿದ್ದ ತೇಜಸ್ವಿ ಅವರ ಚಿಕ್ಕಪ್ಪ ಬೆಂಗಳೂರಿನ ಬಸವನ ಗುಡಿಯ ಶಾಸಕ ರವಿ ಸುಬ್ರಹ್ಮಣ್ಯಂ ಅವರನ್ನೂ ಶ್ರೀಪಾದರು ಅನುಗ್ರಹಿಸಿದರು. ಸಂಸದರಾದಿಯಾಗಿ ಎಲ್ಲರೂ ಮಠದಲ್ಲಿ ರಾತ್ರಿ ಶ್ರೀಕೃಷ್ಣಪ್ರಸಾದ ಭೋಜನ ಸ್ವೀಕರಿಸಿದರು.