ಉಡುಪಿ: ಪಾರ್ಕ್‌ನ ಮರ ಕಡಿದ ಗುತ್ತಿಗೆದಾರ, 25 ಸಾವಿರ ರು. ದಂಡ ವಿಧಿಸಿದ ನಗರಸಭೆ

| Published : Jul 03 2024, 12:18 AM IST

ಉಡುಪಿ: ಪಾರ್ಕ್‌ನ ಮರ ಕಡಿದ ಗುತ್ತಿಗೆದಾರ, 25 ಸಾವಿರ ರು. ದಂಡ ವಿಧಿಸಿದ ನಗರಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಗುತ್ತಿಗೆದಾರನೇ ಮರಗಳನ್ನು ಕಡಿದ ಘಟನೆ ನಡೆದಿದ್ದು, ನಗರ ಸಭೆ 25 ಸಾವಿರ ರು. ದಂಡ ವಿಧಿಸಿದೆ.

ಕನ್ನಡಪ್ರಭ ವಾರ್ತೆ ಉಡುಪಿಪಾರ್ಕಿನ ಮರಗಳನ್ನು ರಕ್ಷಿಸುವ ಹೊಣೆ ಹೊತ್ತ ಗುತ್ತಿಗೆದಾರನೇ ಮರಗಳನ್ನು ಕಡಿದು, 25 ಸಾವಿರ ರು. ದಂಡ ಕಟ್ಟಿದ ಘಟನೆ ಉಡುಪಿಯಲ್ಲಿ ಮಂಗಳವಾರ ನಡೆದಿದೆ.

ನಗರದ ಶ್ವಾಸಕೋಶದಂತಿರುವ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ. ಈ ಪಾರ್ಕಿನ ನಿರ್ವಹಣೆಯನ್ನು ಸುರೇಶ್ ಎಂಬವರು ಗುತ್ತಿಗೆ ಪಡೆದಿದ್ದಾರೆ. ಮಂಗಳವಾರ ಬೆಳಗ್ಗೆ ಏಕಾಏಕಿ ತನ್ನ ಕೆಲಸಗಾರರಿಂದ ಪಾರ್ಕಿನ 4 ಮರಗಳನ್ನು ಕಡಿದು ಧರೆಗುರುಳಿಸಿದ್ದಾರೆ.

ಇದು ಉಡುಪಿ ನಗರದಲ್ಲಿರುವ ಏಕೈಕ ಮತ್ತು ಪುರಾತನ ಪಾರ್ಕ್ ಆಗಿದೆ. ಇಲ್ಲಿ ಗಾಂಧಿ ಸ್ಮಾರಕ ಪ್ರತಿಮೆ ಕೂಡ ಇದೆ. ನೂರಾರು ಮಂದಿ ಬೆಳಗ್ಗೆ ಇಲ್ಲಿ ಜಾಗಿಂಗ್ ನಡೆಸುತ್ತಾರೆ, ಸಂಜೆ ವಿಹಾರಕ್ಕೆ ಬರುತ್ತಾರೆ. ಪ್ರೇಮಿಗಳಿಗೂ ಇದು ನೆಚ್ಚಿನ ತಾಣವಾಗಿದೆ. ಪಾರ್ಕ್ ಮಧ್ಯೆ ಬಯಲು ರಂಗಮಂದಿರ ಕೂಡ ಇದ್ದು, ಇದರಲ್ಲಿ ನಾಟಕೋತ್ಸವ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಇಲ್ಲಿರುವ ರೇಡಿಯೋ ಟವರ್‌ಗೆ ಹತ್ತಾರು ದಶಕಗಳ ಇತಿಹಾಸವೇ ಇದೆ.

ಇಂತಹ ಪಾರ್ಕ್‌ನಲ್ಲಿದ್ದ ಮರಗಳನ್ನು ಕಡಿಯುವುದಕ್ಕೆ ಗುತ್ತಿಗೆದಾರ ನಗರಸಭೆಯಲ್ಲಿ ಪರವಾನಗಿಯನ್ನೂ ಪಡೆದಿರಲಿಲ್ಲ. ಮರಗಳನ್ನು ಕಡಿಯುವುದನ್ನು ಕಂಡ ಪ್ರತೀದಿನ ಇದೇ ಪಾರ್ಕ್‌ನಲ್ಲಿ ಜಾಗಿಂಗ್ ಮಾಡುತ್ತಿರುವ ಶ್ರೀನಿವಾಸ್ ಪ್ರಭು ಎಂಬವವರು ಆಕ್ಷೇಪಿಸಿದ್ದಾರೆ. ಆದರೂ ಗುತ್ತಿಗೆದಾರ ಅದಕ್ಕೆ ಕ್ಯಾರೇ ಎಂದಿಲ್ಲ. ಕೊನೆಗೆ ಪ್ರಭು, ನಗರಸಭೆ ಆಯುಕ್ತರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೌರಾಯುಕ್ತ ರಾಯಪ್ಪ ಅವರು ಅನುಮತಿ ಇಲ್ಲದೇ ಮರಗಳನ್ನು ಕಡಿದ ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು ಮತ್ತು 25 ಸಾವಿರ ರು. ದಂಡ ವಿಧಿಸಿದರು ಮತ್ತು ಕಡಿದ ಪ್ರತಿ ಮರಕ್ಕೆ ತಲಾ 10 ಗಿಡಗಳನ್ನು ನೆಡುವಂತೆ ಆದೇಶಿಸಿದರು.