ಉಡುಪಿ: ಮಳೆಯ ತೀವ್ರತೆ ಕಡಿಮೆ, ಗಾಳಿಯ ಅಬ್ಬರ ಹೆಚ್ಚು

| Published : Jul 25 2024, 01:17 AM IST

ಸಾರಾಂಶ

ಮಳೆಗೆ ಕಾರ್ಕಳದಲ್ಲಿ ಬೀಸಿದ ಗಾಳಿಗೆ ಸುಮಾರು 19 ಮನೆಗಳಿಗೆ ಹಾನಿಯಾಗಿದ್ದು, 5.27 ಲಕ್ಷ ರು. ನಷ್ಟ ಅಂದಾಜಿಸಲಾಗಿದೆ. ಅದೇ ರೀತಿ ಬ್ರಹ್ಮಾವರದಲ್ಲಿ 12 ಮನೆಗಳಿಗೆ 3.70 ಲಕ್ಷ ರು.ಗಳಷ್ಟು ಹಾನಿಯಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲೆಯಲ್ಲಿ ಮಳೆಯ ಪ್ರಕೋಪ ಕಡಿಮೆಯಾಗಿದ್ದರೂ ಗಾಳಿಯ ಆರ್ಭಟ ಮುಂದುವರಿದಿದೆ. ಬುಧವಾರ ಉಡುಪಿ, ಕಾಪು, ಬ್ರಹ್ಮಾವರ ಮುಂತಾದ ಪ್ರದೇಶಗಳಲ್ಲಿ ಮಳೆಯೊಂದಿಗೆ ತೀವ್ರವಾಗಿ ಗಾಳಿಯೂ ಬೀಸಿದೆ.

ಮಂಗಳವಾರ ಕಾರ್ಕಳದಲ್ಲಿ ಬೀಸಿದ ಗಾಳಿಗೆ ಸುಮಾರು 19 ಮನೆಗಳಿಗೆ ಹಾನಿಯಾಗಿದ್ದು, 5.27 ಲಕ್ಷ ರು. ನಷ್ಟ ಅಂದಾಜಿಸಲಾಗಿದೆ. ಅದೇ ರೀತಿ ಬ್ರಹ್ಮಾವರದಲ್ಲಿ 12 ಮನೆಗಳಿಗೆ 3.70 ಲಕ್ಷ ರು.ಗಳಷ್ಟು ಹಾನಿಯಾಗಿದೆ. ಉಡುಪಿ ತಾಲೂಕಿನಲ್ಲಿ 5 ಮನೆಗಲಿಗೆ 80 ಸಾವಿರ ರು., ಕಾಪು ತಾಲೂಕಿನಲ್ಲಿ 3 ಮನೆಗಳಿಗೆ 85 ಸಾವಿರ ಮತ್ತು ಬೈಂದೂರು ತಾಲೂಕಿನ 2 ಮನೆಗಳಿಗೆ 1.65 ಲಕ್ಷ ರು.ಗಳಷ್ಟು ನಷ್ಟವಾಗಿದೆ.

ಕಾರ್ಕಳ ತಾಲೂಕಿನ ಕಾರ್ಕಳ ಕಸಬಾದ ನಿವಾಸಿ ಸುಧಾ ಸದಾಶಿವ ಅವರ ವಾಸದ ಮನೆಯ ಮೇಲೆ ಮರ ಬಿದ್ದು ಸುಮಾರು 1,00,000 ರು. ನಷ್ಟವಾಗಿದ್ದರೆ, ಬೈಂದೂರು ತಾಲೂಕಿನ ಮುದೂರು ಗ್ರಾಮದ ವಿಜಯಮ್ಮ ಅವರ ವಾಸ್ತವ್ಯದ ಮನೆಗೆ ಗಾಳಿ ಮ‍ಳೆಯಿಂದ 1,50,000 ರು. ಹಾನಿಯಾಗಿದೆ.

ಕುಂದಾಪುರ ತಾಲೂಕಿನಲ್ಲಿ ಉಳ್ಳೂರು ಗ್ರಾಮದಲ್ಲಿ ಗಾಳಿಮಳೆಗೆ 4 ಮನೆಗಳ ತೋಟಕ್ಕೆ ಹಾನಿಯಾಗಿದೆ. ಇಲ್ಲಿನ ಶ್ರೀಮತಿ ಶೆಟ್ಟಿ ಅವರಿಗೆ 15,000 ರು., ಗಿರಿಜಾ ಅವರಿಗೆ 15,000 ರು., ಗುಲಾಬಿ ಶೆಟ್ಟಿ ಅವರಿಗೆ 15,000 ರು., ಜೋಗು ಕುಲಾಲ ಅವರಿಗೆ 50,000 ರು., ಬೆಳ್ಳಾಲ ಗ್ರಾಮದ ಶಾಲಿನಿ ಅವರಿಗೆ 10,000 ರು., ಯಡಮೊಗೆ ಗ್ರಾಮದ ರತ್ನ ನಾಯ್ಕ್ ಅವರಿಗೆ 50,000 ರು., ಹೊಸಂಗಡಿ ಗ್ರಾಮದ ಸೀತಾರಾಮ ಶೆಟ್ಟಿ ಅವರಿಗೆ 20,000 ರು. ಹಾನಿ ಸಂಭವಿಸಿದೆ. ಮತ್ತು ದೇವಲ್ಕುಂದ ಗ್ರಾಮದ ನೀಲು ಅವರ ಜಾನುವಾರು ಕೊಟ್ಟಿಗೆಗೆ 10,000 ರು. ನಷ್ಟ ಉಂಟಾಗಿದೆ.

ಬುಧವಾರ ಮುಂಜಾನೆ ವರೆಗೆ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 45.70 ಮಿ.ಮೀ. ಮಳೆ ದಾಖಲಾಗಿದೆ. ತಾಲೂಕುವಾರು ಕಾರ್ಕಳ 36.90, ಕುಂದಾಪುರ 53.30, ಉಡುಪಿ 24.10, ಬೈಂದೂರು 63.60, ಬ್ರಹ್ಮಾವರ 26.50, ಕಾಪು 32.90, ಹೆಬ್ರಿ 60.50 ಮಿ.ಮೀ. ಮಳೆ ಆಗಿದೆ.

-------ಇನ್ನೂ ಎರಡು ದಿನ ಗಾಳಿಮಳೆ

ಇನ್ನೂ ಎರಡು ದಿನ ಉಡುಪಿ ಜಿಲ್ಲೆಯಲ್ಲಿ ಉತ್ತಮ ಮಳೆಯ ಜೊತೆಗೆ ಜೋರಾದ ಗಾಳಿಯೂ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ. ಗಂಟೆಗೆ 45 - 60 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಕಡಲ ತೀರದ ಜನರು ಎಚ್ಚರಿಕೆಯಿಂದಿರುವಂತೆ ತಿಳಿಸಿದೆ.