ಹಳ್ಳಿಗಳಲ್ಲಿ ಪದವಿ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ನಗರಗಳತ್ತ ವಲಸೆ ಹೋಗಬೇಕಾದ ಅನಿವಾರ್ಯತೆ ಇತ್ತೀಚಿನವರೆಗೂ ಇದ್ದೇ ಇತ್ತು. ಆದರೆ ಈ ಸ್ಥಿತಿಗೆ ದೊಡ್ಡ ಮಟ್ಟದ ಬದಲಾವಣೆ ತರುವ ಕಾರ್‍ಯವನ್ನು ಹೆಬ್ರಿ ತಾಲೂಕಿನ ಮುನಿಯಾಲು ಗ್ರಾಮದಲ್ಲಿರುವ ಡಿಗ್ರಿ ಕಾಲೇಜು ಯಶಸ್ವಿಯಾಗಿ ಮಾಡುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಾಲಿಗೆ ಈ ಕಾಲೇಜು ನಿಜಾರ್ಥದಲ್ಲಿ ಆಶಾಕಿರಣ
ರಾಂ ಅಜೆಕಾರು
ಕನ್ನಡಪ್ರಭ ವಾರ್ತೆ ಕಾರ್ಕಳಹಳ್ಳಿಗಳಲ್ಲಿ ಪದವಿ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ನಗರಗಳತ್ತ ವಲಸೆ ಹೋಗಬೇಕಾದ ಅನಿವಾರ್ಯತೆ ಇತ್ತೀಚಿನವರೆಗೂ ಇದ್ದೇ ಇತ್ತು. ಆದರೆ ಈ ಸ್ಥಿತಿಗೆ ದೊಡ್ಡ ಮಟ್ಟದ ಬದಲಾವಣೆ ತರುವ ಕಾರ್‍ಯವನ್ನು ಹೆಬ್ರಿ ತಾಲೂಕಿನ ಮುನಿಯಾಲು ಗ್ರಾಮದಲ್ಲಿರುವ ಡಿಗ್ರಿ ಕಾಲೇಜು ಯಶಸ್ವಿಯಾಗಿ ಮಾಡುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಾಲಿಗೆ ಈ ಕಾಲೇಜು ನಿಜಾರ್ಥದಲ್ಲಿ ಆಶಾಕಿರಣವಾಗಿದೆ.
ಮುನಿಯಾಲು ವರಂಗ ಗ್ರಾಮ ವ್ಯಾಪ್ತಿಯಲ್ಲಿ ಸ್ಥಾಪನೆಯಾದ ಈ ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ಹಳ್ಳಿಯಲ್ಲೇ ಒದಗಿಸುತ್ತಿದೆ. ಇಲ್ಲಿ ಬಿಕಾಂ ಹಾಗೂ ಬಿಎ ಕೋರ್ಸ್‌ಗಳು ಲಭ್ಯವಿದ್ದು, ಆಧುನಿಕ ಗ್ರಂಥಾಲಯ ಹಾಗೂ ಉಚಿತ ಕಂಪ್ಯೂಟರ್ ಶಿಕ್ಷಣವು ವಿದ್ಯಾರ್ಥಿಗಳಿಗೆ ದೊಡ್ಡ ವರದಾನವಾಗಿದೆ. ದಾನಿಗಳ ಸಹಕಾರದಿಂದ ಅಗತ್ಯ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಾರ್ಕಳದ ಜರ್ಮನ್ ತಂತ್ರಜ್ಞಾನ ಸಂಸ್ಥೆ (ಎನ್ ಜಿಟಿಟಿ) ಸಿಬ್ಬಂದಿ ಸ್ವ ಉದ್ಯೋಗ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿಗಳಿಗೆ ಕೈಜೋಡಿಸಿರುವುದು ವಿಶೇಷ.ಈ ಕಾಲೇಜಿನಲ್ಲಿ ಪೂರ್ಣಕಾಲಿಕ ಹಾಗೂ ಅನುಭವಿ ಉಪನ್ಯಾಸಕರು ಕಾರ್‍ಯನಿರ್ವಹಿಸುತ್ತಿದ್ದು, ಬಹುತೇಕ ಪ್ರಾಧ್ಯಾಪಕರು ಪಿಎಚ್‌ಡಿ ಪದವೀಧರರಾಗಿರುವುದು ಕಾಲೇಜಿನ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಸುಮಾರು 4.20 ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ವಿದ್ಯಾರ್ಥಿಗಳ ದೈಹಿಕ ಹಾಗೂ ಕ್ರೀಡಾ ಬೆಳವಣಿಗೆಗೂ ಸಮಾನ ಮಹತ್ವ ನೀಡಲಾಗುತ್ತಿದೆ.2014ರಲ್ಲಿ ಸ್ಥಳೀಯರ ಸಹಕಾರದಿಂದ ಆರಂಭವಾದ ಈ ಕಾಲೇಜು 2019ರಿಂದ ಸುಸಜ್ಜಿತ ಕಟ್ಟಡವನ್ನು ಹೊಂದಿದೆ.
ಇಂದು ಕಾರ್ಕಳ ತಾಲೂಕಿನ ಕೆರುವಾಶೆ, ಅಜೆಕಾರು ಮರ್ಣೆ, ಎಣ್ಣೆಹೊಳೆ, ಶಿರ್ಲಾಲು, ಮುನಿಯಾಲು, ಮುದ್ರಾಡಿ, ಪಡುಕುಡೂರು, ಕಡ್ತಲ, ಎಳ್ಳಾರೆ, ಕಬ್ಬಿನಾಲೆ, ಮುಟ್ಲುಪಾಡಿ, ಅಂಡಾರು, ಹೆರ್ಮುಂಡೆ, ಕುಕ್ಕುಜೆ ಸೇರಿದಂತೆ ಹಲವಾರು ಗ್ರಾಮಗಳ ವಿದ್ಯಾರ್ಥಿಗಳು ಶಿಕ್ಷಣ ಅರಸಿಕೊಂಡು ಬರುತ್ತಿದ್ದಾರೆ.ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ‘ತುಂತುರು’ ಕಾರ್‍ಯಕ್ರಮದಡಿ ಶೈಕ್ಷಣಿಕ ಸ್ಪರ್ಧೆಗಳು, ಕಸದಿಂದ ರಸ ತಯಾರಿಕೆ, ಸಾಂಸ್ಕೃತಿಕ ವೈಭವ ಕಾರ್‍ಯಗಳೊಂದಿಗೆ ಸರಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಭಾನ್ವೇಷಣೆ ಹಾಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಸೀತಾರಾಂ ಜಿಂದಾಲ್ ಫೌಂಡೇಶನ್, ಸಂತೂರ್ ಸ್ಕಾಲರ್‌ಶಿಪ್, ಶ್ರೀರಾಮ್ ಟ್ರಸ್ಟ್, ಬಿಲ್ಲವ ಸಂಘಗಳ ಸ್ಕಾಲರ್‌ಶಿಪ್, ಅಜಿಂ ಪ್ರೇಮ್ ಜಿ ಅವರ ದೀಪಿಕಾ ಸ್ಕಾಲರ್ ಶಿಪ್ ಸೇರಿದಂತೆ ಅನೇಕ ಸಂಸ್ಥೆಗಳ ನೆರವು ಬಡ ಹಾಗೂ ಕಾರ್ಮಿಕ ಕುಟುಂಬಗಳ ಮಕ್ಕಳಿಗೆ ಲಭ್ಯವಾಗಿದೆ. ಈಗಾಗಲೇ ಕಾಲೆಜಿನ ವಿದ್ಯಾರ್ಥಿಗಳಿಗೆ ಸ್ತಳೀಯ ಉದ್ಯಮಿಗಳು, ದಾನಿಗಳು ಕೈಜೊಡಿಸಿದ್ದು, ಕಾಲೇಜಿನ ಅಭಿವೃದ್ದಿ ಸಮಿತಿಯು ಪ್ರೊತ್ಸಾಹ ನೀಡುತ್ತಿದೆ.ಪಠ್ಯೇತರ ಚಟುವಟಿಕೆಗಳಿಗಾಗಿ ಸ್ಕೌಟ್ಸ್ ಆಂಡ್ ಗೈಡ್ಸ್, ರೋವರ್ ರೆಂಜರ್ಸ್, ಎನ್ನೆಸ್ಸೆಸ್ಸೆ ಹಾಗೂ ರೆಡ್ ಕ್ರಾಸ್ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಕಾಲೇಜಿಗೆ ಯುಜಿಸಿ ವತಿಯಿಂದ ನ್ಯಾಕ್ ‘ಬಿ’ ಶ್ರೇಣಿ ಮಾನ್ಯತೆ ದೊರೆತಿದೆ. ನಿತ್ಯ ಶೃಂಗೇರಿ ಮಠದ ವತಿಯಿಂದ ಮಧ್ಯಾಹ್ನ ಅನ್ನದಾನ ನಡೆಯುತ್ತದೆ. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತಿದ್ದಾರೆ.ಕಾಲೇಜಿಗೆ ಯುಜಿಸಿ ವತಿಯಿಂದ ನ್ಯಾಕ್ ‘ಬಿ’ ಶ್ರೇಣಿ ಮಾನ್ಯತೆ ದೊರೆತಿದೆ. ಹೆಚ್ಚಿನ ಪ್ರಾಧ್ಯಾಪಕರು ಪಿಎಚ್‌ಡಿ ಪದವಿಧರರಾಗಿದ್ದು, ಅನುಭವಿ ಪ್ರಾಧ್ಯಾಪಕರಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ನಿತ್ಯ ಶೃಂಗೇರಿ ಮಠದ ವತಿಯಿಂದ ಮಧ್ಯಾಹ್ನ ಅನ್ನದಾನ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ಸಹಕಾರ ದೊರೆಯುತ್ತಿದೆ. ಜೊತೆಗೆ ಕಾರ್ಕಳದ ಜರ್ಮನ್ ತಂತ್ರಜ್ಞಾನ ಸಂಸ್ಥೆಯ ಸಿಬ್ಬಂದಿಗಳು ಸ್ವ ಉದ್ಯೋಗ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿಗಳಿಗೆ ಕೈಜೋಡಿಸಿರುವುದು ಈ ಕಾಲೇಜಿನ ವಿಶೇಷತೆಯಾಗಿದೆ.
-ಸುಧಾಕರ್ ಕೆ.ಜಿ., ಪ್ರಾಂಶುಪಾಲರು ಸರಕಾರಿ ಪ್ರಥಮದರ್ಜೆ ಕಾಲೇಜು ಹೆಬ್ರಿ