ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನಿಸರ್ಗ (ರೇಶ್ಮಾ ಮತ್ತು ರಾಘವೇಂದ್ರ ಖಾರ್ವಿ ಇವರ ಪುತ್ರಿ) ಇವಳಿಗೆ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಕಿದಿಯೂರು ಎಸ್.ವಿ.ಎಸ್.ಟಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎ. ಭಾಸ್ಕರ ಭಟ್ ಇವರ ಪ್ರಾಯೋಜಕತ್ವದಲ್ಲಿ 7 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ ನೂತನ ‘ಲಲಿತಾ ಸದನ’ ಮನೆಯನ್ನು ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು
ಉಡುಪಿ: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನಿಸರ್ಗ (ರೇಶ್ಮಾ ಮತ್ತು ರಾಘವೇಂದ್ರ ಖಾರ್ವಿ ಇವರ ಪುತ್ರಿ) ಇವಳಿಗೆ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಕಿದಿಯೂರು ಎಸ್.ವಿ.ಎಸ್.ಟಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎ. ಭಾಸ್ಕರ ಭಟ್ ಇವರ ಪ್ರಾಯೋಜಕತ್ವದಲ್ಲಿ 7 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ ನೂತನ ‘ಲಲಿತಾ ಸದನ’ ಮನೆಯನ್ನು ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ನಂತರ ಶ್ರೀಗಳು ತಮ್ಮ ಅನುಗ್ರಹ ಸಂದೇಶದಲ್ಲಿ ಯಕ್ಷಗಾನ ಕಲಾರಂಗ ಇಡೀ ಉಡುಪಿ ಅಭಿಮಾನ ಪಡುವ ಸಂಘಟನೆ. ಅವರ ಸಾಮಾಜಿಕ ಕಳಕಳಿ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕಾರ್ಯಕರ್ತರು ವಹಿಸುವ ಪರಿಶ್ರಮ ಅನನ್ಯ. ಪಾರದರ್ಶಕ ವ್ಯವಹಾರದಿಂದ ಸಮಾಜದಲ್ಲಿ ಪಡೆದಿರುವ ವಿಶ್ವಾಸಾರ್ಹತೆ ಎಲ್ಲ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹರಸಿದರು.ಎ. ಭಾಸ್ಕರ ಭಟ್ ಮಾತನಾಡಿ ಕಲಾರಂಗದ ಸದಸ್ಯ ಎನ್ನಲು ನನಗೆ ಹೆಮ್ಮೆಯಾಗುತ್ತದೆ. ರುಚಿಶುದ್ಧಿ ಯಕ್ಷಗಾನ ಸಂಯೋಜಿಸುತ್ತಾ ಬಂದ ಸಂಸ್ಥೆ ಈಗ ಸಮಾಜ ಮತ್ತು ಶಿಕ್ಷಣಕ್ಕಾಗಿ ಮಾಡುತ್ತಿರುವ ಕೆಲಸ ಕಂಡು ಬೆರಗಾಗಿದ್ದೇನೆ. ಮನೆ ನಿರ್ಮಿಸಿ ಕೊಡುವ ಅವಕಾಶ ಕಲ್ಪಿಸಿ ನನ್ನ ಸಂಕಲ್ಪ ಈಡೇರಿಸಿದ್ದಕ್ಕಾಗಿ ನಾನು ಸಂಸ್ಥೆಗೆ ಕೃತಜ್ಞ. ಪ್ರತೀವರ್ಷ ವಿದ್ಯಾಪೋಷಕ್‌ಗೆ ಒಂದು ಮೊತ್ತ ನೀಡುತ್ತೇನೆ ಎಂದರು.ವಿದ್ಯಾಸಮುದ್ರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗುಂಡು ಬಿ. ಅಮಿನ್, ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ ಅಭ್ಯಾಗತರಾಗಿ ಭಾಗವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಎಸ್. ವಿ. ಭಟ್, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಸದಸ್ಯರು ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.