ಉಡುಪಿ: ಅಸ್ಸಾಂನ ಗುವಹಾಟಿಗೆ ಪ್ರವಾಸ ತೆರಳಿದ್ದ ಉಡುಪಿ ತಂಡದಲ್ಲಿದ್ದ ಇಲ್ಲಿನ ಕಾಪು ತಾಲೂಕಿನ ಕಟಪಾಡಿ ಸರ್ಕಾರಿಗುಡ್ಡೆಯ ನಿವಾಸಿ ಆಶೋಕ್ ಆಚಾರ್ಯ (33) ಹಠಾತ್ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದಾರೆ. ಅವರು 10 ದಿನಗಳ ಹಿಂದೆ ಗೆಳೆಯರೊಂದಿಗೆ ಗುವಾಹಟಿಗೆ ತೆರಳಿದ್ದರು. ಅಲ್ಲಿ ತಂಗಿದ್ದ ಹೊಟೇಲಿನ ಕೊಠಡಿಯಲ್ಲಿ ಸ್ನಾನ ಮಾಡಿ ಹೊರಗೆ ಬರುವಾಗ ತಲೆ ತಿರುಗಿದೆ ಎಂದು ಹೇಳಿ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ವೈದ್ಯರು ತಿಳಿಸಿದ್ದು, 8 ದಿನಗಳ ಕಾಲ ಆಸ್ಪತ್ರೆಯಲ್ಲಿ ಟಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ನಂತರ ಗೆಳೆಯರು ಅವರ ಪಾರ್ಥಿವ ಶರೀರವನ್ನು ಭಾನುವಾರ ಬೆಂಗಳೂರಿಗೆ ತಂದು, ಸೋಮವಾರ ಅಲ್ಲಿಂದ ಹುಟ್ಟೂರಿಗೆ ತಂದು ಅಂತಿಮ ಸಂಸ್ಕಾರ ನಡೆಸಲಾಯಿತು. ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್ ಆಗಿದ್ದ ಅಶೋಕ್ ಉತ್ತಮ ಗೆಳೆಯರಾಗಿದ್ದರು, ಅವಿವಾಹಿತರಾಗಿದ್ದ ಅವರು ಮೂವರು ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.