ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಸಂಘ- ಸಂಸ್ಥೆಗಳನ್ನು ಗುರುತಿಸಿ, ಹೆಚ್ಚಿನ ಪ್ರಮಾಣದಲ್ಲಿ ಧನ ಸಹಾಯವನ್ನು ನೀಡುವ ಜೊತೆಗೆ ಕಲಾವಿದರಿಗೆ ಹೆಚ್ಚಿನ ಮಾಶಾಸನ, ಆರೋಗ್ಯ ವಿಮೆ, ಮನೆಗಳನ್ನು ಸರ್ಕಾರವೇ ನಿರ್ಮಿಸಿ ಕೊಡುವುದರ ಮುಖಾಂತರ ಪ್ರೋತ್ಸಾಹಿಸಿ ಪ್ರಸ್ತುತ ಅಳಿವಿನಂಚಿನಲ್ಲಿರುವ ಇಂಥ ಕಲೆಗಳನ್ನು ಉಳಿಸಬೇಕು ಎಂದು ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಭಾರತೀಯ ಸಂಸ್ಕೃತಿಯಲ್ಲಿ ಯುಗಾದಿ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ. ಜೀವನದ ಎಲ್ಲ ಕಹಿ ಘಟನೆಗಳನ್ನು ಮರೆತು ಸುಖ, ಸಂತೋಷ ಹಾಗೂ ನೆಮ್ಮದಿಯಿಂದ ಬಾಳ್ವೆ ನಡೆಸುವ ಸಂದೇಶ ಸಾರುವ ಆಚರಣೆಯಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಂ.ಬಸಪ್ಪ ನೆಲಮಾಕನಹಳ್ಳಿ ತಿಳಿಸಿದರು.ತಾಲೂಕಿನ ರಾಗಿಬೊಮ್ಮನಹಳ್ಳಿಯಲ್ಲಿ ಪೂರಿಗಾಲಿಯ ಜೈ ಭೀಮ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಗುರುವಾರ ಆಯೋಜಿಸಿದ್ದ ಯುಗಾದಿ ಸಂಭ್ರಮ ಹಾಗೂ ಜನಪದ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವದೆಲ್ಲೆಡೆ ಪ್ರಸ್ತುತ ಸಣ್ಣಪುಟ್ಟ ವಿಚಾರಗಳಿಗಾಗಿ ಧರ್ಮ, ಜಾತಿಯ ನಡುವೆ ಕೋಮು ಸಂಘರ್ಷಗಳು ನಡೆಯುತ್ತಿವೆ. ಜಗತ್ತಿನಲ್ಲಿಡೆ ಅಶಾಂತಿ ಉಂಟಾಗಿ ತಲ್ಲಣಿಸುವಂತಹ ಸನ್ನಿವೇಶಗಳನ್ನು ನಾವು ಕಾಣುತ್ತಿದ್ದೇವೆ. ಇಂತಹ ಸನ್ನಿವೇಶಗಳು ಇಲ್ಲಿಗೆ ಕೊನೆಯಾಗಿ ಮುಂದಿನ ದಿನಗಳಲ್ಲಿ ಸುಖ, ಶಾಂತಿ, ನೆಮ್ಮದಿಯೊಂದಿಗೆ ಹರ್ಷದಿಂದ ಬಾಳುವಂತಾಗಲಿ ಎಂದು ಹಾರೈಸಿದರು.ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಲ್.ಚೇತನ್ ಕುಮಾರ್ ಮಾತನಾಡಿ, ತಾಲೂಕು ಪವಾಡ ಪುರುಷರಾದ ಮಲೆ ಮಹದೇಶ್ವರರು, ಸಿದ್ದಪ್ಪಾಜಿ, ಮಂಟೇಸ್ವಾಮಿ ಸೇರಿದಂತೆ ಅನೇಕರು ಜನಪದ ಜಂಗಮರು, ಸಾಹಿತಿಗಳು, ಬುದ್ಧಿಜೀವಿಗಳು ನಡೆದಾಡಿರುವಂತಹ ಹಾಗೂ ಜನಪದ ಪ್ರಕಾರಗಳಾದ ತಂಬೂರಿ, ಸೋಬಾನೆ ಪದಗಳು, ಕೋಲಾಟ, ತಮಟೆ ಸೇರಿದಂತೆ 64 ಜನಪದ ಪ್ರಕಾರಗಳನ್ನು ಮತ್ತು ಕಲಾವಿದರನ್ನು ಹೊಂದಿರುವ ಪವಿತ್ರಸ್ಥಳವಾಗಿದೆ ಎಂದು ಬಣ್ಣಿಸಿದರು.
ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಸಂಘ- ಸಂಸ್ಥೆಗಳನ್ನು ಗುರುತಿಸಿ, ಹೆಚ್ಚಿನ ಪ್ರಮಾಣದಲ್ಲಿ ಧನ ಸಹಾಯವನ್ನು ನೀಡುವ ಜೊತೆಗೆ ಕಲಾವಿದರಿಗೆ ಹೆಚ್ಚಿನ ಮಾಶಾಸನ, ಆರೋಗ್ಯ ವಿಮೆ, ಮನೆಗಳನ್ನು ಸರ್ಕಾರವೇ ನಿರ್ಮಿಸಿ ಕೊಡುವುದರ ಮುಖಾಂತರ ಪ್ರೋತ್ಸಾಹಿಸಿ ಪ್ರಸ್ತುತ ಅಳಿವಿನಂಚಿನಲ್ಲಿರುವ ಇಂಥ ಕಲೆಗಳನ್ನು ಉಳಿಸಬೇಕು ಎಂದು ಒತ್ತಾಯಿಸಿದರು.ಕಾರ್ಯಕ್ರಮದಲ್ಲಿ ಜೈ ಭೀಮ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಎಂ.ಎನ್.ಜಯರಾಜ್ ಅಧ್ಯಕ್ಷತೆ ವಹಿಸಿದ್ದರು. ವಿಸ್ಮಯ ಕಲಾ ಬಳಗದ ಅಧ್ಯಕ್ಷ ಆರ್.ಎಂ.ಮಹದೇವಸ್ವಾಮಿ, ಎಂ.ಜಗದೀಶ್, ಮಲ್ಲೇಶ್, ದೇವಪ್ರಸಾದ್, ಶಾಂತಿ ಶ್ರೀನಿವಾಸ್, ನಾಗರಾಜಮೂರ್ತಿ, ಗಾಯಕಿ ನಾಗರತ್ನ ಸೇರಿದಂತೆ ಅನೇಕರು ಜಾನಪದ ಉತ್ಸವದಲ್ಲಿ ಜನಪದ ಗೀತೆಗಳನ್ನು ಹಾಡಿ ರಂಜಿಸಿದರು.
ಮುಖಂಡರಾದ ವಿನೋದ್ ಕುಮಾರ್, ಮಹದೇವ ಪಾಲ್ಗೊಂಡಿದ್ದರು.