ಹರುಷ ತಂತು ಯುಗಾದಿ

| Published : Apr 09 2024, 12:47 AM IST

ಸಾರಾಂಶ

ಹಿಂದೂ ಸಂಪ್ರದಾಯ ಪ್ರಕಾರ ಹೊಸ ವರ್ಷದ ಆರಂಭವೇ ಯುಗಾದಿ. ಹಬ್ಬದ ಮುನ್ನಾ ದಿನವಾದ ಸೋಮವಾರ ಎಲ್ಲೆಡೆ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಯುಗಾದಿ ನೆಪದಲ್ಲಿ ಹೊಸ ವರ್ಷದ ಆಚರಣೆಗೆ ದೇವನಗರಿ ಸಿದ್ಧತೆ ನಡೆಸಿದೆ.

- ಜಿಲ್ಲಾದ್ಯಂತ ಹೊಸ ವರ್ಷದ ಸ್ವಾಗತಕ್ಕೆ ಸಜ್ಜಾದ ಜನತೆ- ಸಮೃದ್ಧ ಮಳೆ, ಬೆಳೆ ನಿರೀಕ್ಷೆಯಲ್ಲಿ ಹಬ್ಬಕ್ಕೆ ಭರ್ಜರಿ ಸಿದ್ಧತೆ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಹಿಂದೂ ಸಂಪ್ರದಾಯ ಪ್ರಕಾರ ಹೊಸ ವರ್ಷದ ಆರಂಭವೇ ಯುಗಾದಿ. ಹಬ್ಬದ ಮುನ್ನಾ ದಿನವಾದ ಸೋಮವಾರ ಎಲ್ಲೆಡೆ ಸಂಭ್ರಮದ ವಾತಾವರಣ ಮನೆ ಮಾಡಿತ್ತು.

ಯುಗಾದಿ ನೆಪದಲ್ಲಿ ಹೊಸ ವರ್ಷದ ಆಚರಣೆಗೆ ದೇವನಗರಿ ಸಿದ್ಧತೆ ನಡೆಸಿದೆ. ಯುಗಾದಿ ಅಭ್ಯಂಗ ಸ್ನಾನ, ಹೊಸ ಬಟ್ಟೆ ತೊಟ್ಟು, ಬೇವು ಬೆಲ್ಲ ತಿಂದು ಮನೆ ಮಂದಿಯೆಲ್ಲ ಶಾವಿಗೆಯೊಂದಿಗೆ ಸಕ್ಕರೆ, ಹಾಲು ಬೆರೆಸಿ ಸೇವನೆ, ಬೇವು-ಬೆಲ್ಲ ವಿತರಣೆ ಸಂಭ್ರಮ ಈ ಹಬ್ಬದ ವಿಶೇಷಗಳು.

ಮಳೆ ಇಲ್ಲ. ಎಲ್ಲಿ ನೋಡಿದರೂ ಬಿಸಿಲು. ವಿದ್ಯುತ್ ಕಣ್ಣಾ ಮುಚ್ಚಾಲೆ. ಶೆಖೆಯಿಂದ ತತ್ತರಿಸುತ್ತಿರುವ ಜನತೆ. ಮತ್ತೊಂದೆಡೆ ಲೋಕಸಭಾ ಚುನಾವಣೆಯ ಕಾವು. ಇದರ ಮಧ್ಯೆಯೇ ಸಂಭ್ರಮದ ಯುಗಾದಿ.

ಇತ್ತೀಚೆಗಷ್ಟೇ ದಾವಣಗೆರೆ ನಗರದೇವತೆ ಶ್ರೀ ದುರ್ಗಾಂಬಿಕಾ ಜಾತ್ರೆ ಸಂಭ್ರಮ, ಸಡಗರದಿಂದ ಜನತೆ ಆಚರಿಸಿದ್ದಾರೆ. ಏನೇ ಕಷ್ಟ ಇದ್ದರೂ ಹಬ್ಬಗಳನ್ನು ಆಚರಿಸುತ್ತಾರೆ. ಯುಗಾದಿ ಹಬ್ಬದಲ್ಲಿ ಗಂಡುಮಕ್ಕಳು ಹೊಸ ಬಟ್ಟೆ, ತೊಡುವ ಜೊತೆಗೆ ಹೊಸ ಉಡುದಾರ ಕಟ್ಟಿಕೊಳ್ಳುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಉಡುದಾರ ಮಾರಾಟಗಾರರು ನಗರದಲ್ಲಿ ಕಂಡುಬಂದರು. ಬೇವಿನ ಸೊಪ್ಪು, ಮಾವಿನ ಎಲೆ, ಅಡಕೆ ಹೊಂಬಾಳೆ, ಬಿಲ್ಪತ್ರೆ ಹೊಂದಿಸುವಲ್ಲಿ ಜನರು ಬ್ಯುಸಿಯಾಗಿದ್ದರು.

ಬೆಲೆ ಏರಿಕೆ:

ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳ ದರಗಳು ಗಗನಕ್ಕೇರಿದ್ದವು. ಹೂವಿನ ದರ ಮಾಮೂಲಿಗಿಂತ ದುಪ್ಪಟ್ಟಾಗಿತ್ತು. ಬೇಸಿಗೆ, ಬರದಿಂದಾಗಿ ನೀರಿನ ಅಭಾವ ಪರಿಣಾಮ ಹೂವಿನ ಇಳುವರಿ ಕಡಿಮೆಯಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ. ಸೇವಂತಿಗೆ ಪ್ರತಿಮಾರಿಗೆ ₹100-₹150, ಕನಕಾಂಬರ ಹಾಗೂ ಮಲ್ಲಿಗೆ ಪ್ರತಿ ಮಾರು ₹80- ₹100, ಸುಗಂಧರಾಜ ಸಣ್ಣ ಮಾಲೆ ದರ ₹100ಗೆ ಏರಿಕೆ ಕಂಡಿತ್ತು.

ಬೇಳೆ, ಬೆಲ್ಲ, ಸಕ್ಕರೆ, ಅಡುಗೆ ಎಣ್ಣೆ, ಶ್ಯಾವಿಗೆ ಸೇರಿದಂತೆ ಎಲ್ಲ ಪದಾರ್ಥಗಳೂ ದುಬಾರಿಯಾಗಿವೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ಹಬ್ಬದ ವ್ಯಾಪಾರ-ವಹಿವಾಟು ಮಂದವಾಗಿದೆ. ಹಣ್ಣು, ತರಕಾರಿ, ಹೂವು, ದಿನಸಿ ಪದಾರ್ಥಗಳೆಲ್ಲವೂ ದುಬಾರಿ ಆಗಿರುವುದು ಜನರಲ್ಲಿ ಉತ್ಸಾಹ ಕೊಂಚ ಕುಂದಿತ್ತು. ಬಟ್ಟೆ ಅಂಗಡಿಗಳಲ್ಲಿ ಜನದಟ್ಟಣೆ ಹೆಚ್ಚಾಗಿ ಕಂಡುಬಂತು.

ಅಮಾವಾಸ್ಯೆ ಪೂಜೆಗಳು:

ಯುಗಾದಿ ಅಮಾವಾಸ್ಯೆ ಹಿನ್ನೆಲೆ ಸೋಮವಾರ ಮುಂಜಾನೆಯಿಂದಲೇ ಜನರು ವಾಹನಗಳನ್ನು ಶುಚಿಗೊಳಿಸಿ, ವಾಹನಗಳನ್ನು ಅಲಂಕರಿಸಿ ಅಮಾವಾಸ್ಯೆ ಪೂಜೆ ನಡೆಸಿದರು. ದುರ್ಗಾಂಬಿಕಾ ದೇವಿ, ಹಳೇ ಪೇಟೆ ಶ್ರೀ ವೀರಭದ್ರೇಶ್ವರ, ವಿನೋಬನಗರ, ನಿಟ್ಟುವಳ್ಳಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಗಣಪತಿ ದೇವಸ್ಥಾನಗಳು ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಕ್ತರಿಂದ ದರ್ಶನ ನಡೆದವು.

- - - ಫೋಟೋ ಬರಲಿವೆ.