ಸಾರಾಂಶ
- ಚಿಕ್ಕಮಗಳೂರು ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಗರ ವ್ಯಾಪ್ತಿಯಲ್ಲಿ ಒಳ ಚರಂಡಿ ಕಾಮಗಾರಿ 2012ರಲ್ಲಿ ಆರಂಭಗೊಂಡ 13 ವರ್ಷದಿಂದ ಪೂರ್ಣಗೊಂಡಿಲ್ಲ. ಹಾಗೆಯೇ ಅಮೃತ್ ಯೋಜನೆ ಕಾಮಗಾರಿ 2015 ರಲ್ಲಿ ಆರಂಭವಾಗಿ 10 ವರ್ಷದಿಂದ ನಡೆಯುತ್ತಿದೆ. ಶೀಘ್ರವೇ ಈ ಎರಡೂ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ನಗರದ ಗಾಂಧಿನಗರ ಆಟೋ ನಿಲ್ದಾಣದ ಬಳಿ ಭಾನುವಾರ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಎರಡೂ ಕಾಮಗಾರಿಗಳನ್ನು ಆರಂಭಿಸಿದವರು ಯಾರು ? ಯಾವ ಕಾರಣಕ್ಕೆ ಇದುವರೆಗೂ ಕಾಮಗಾರಿಗಳು ಮುಗಿದಿಲ್ಲ ಎಂಬ ಬಗ್ಗೆ ನಾನು ಮಾತನಾಡುವುದಿಲ್ಲ. ಬೇರೆಯವರನ್ನು ದೂರುವ ಬದಲು ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.ಯುಜಿಡಿ ಕಾಮಗಾರಿ ಹಾಗೂ ಅಮೃತ್ ಯೋಜನೆ ಕಾಮಗಾರಿಗಳು ನಡೆಯುತ್ತಿರುವ ಕಾರಣದಿಂದ ನಗರ ವ್ಯಾಪ್ತಿಯ ರಸ್ತೆಗಳು ಹಾಳಾಗಿದ್ದವು. ಈ ಎರಡೂ ಯೋಜನೆಗಳ ಕಾಮಗಾರಿಗಳು ಮುಕ್ತಾಯಗೊಳ್ಳುವ ಹಂತಕ್ಕೆ ಬಂದಿವೆ. ಹೀಗಾಗಿ ಶೀಘ್ರವೇ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ನಗರದ ಪ್ರತಿಯೊಂದು ರಸ್ತೆ ಅಭಿವೃದ್ಧಿಗೊಳಿಸುವ ಸಂಬಂಧ ಕ್ರಮ ಕೈಗೊಳ್ಳಲಾಗಿದೆ. ನಗರದ ರಸ್ತೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ₹10 ಕೋಟಿ ವಿಶೇಷ ಅನುದಾನ ನೀಡಿದ್ದಾರೆ. ಇದಲ್ಲದೆ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರದ ವಿಶೇಷ ಅನುದಾನದಡಿ ನೀಡಲಾಗಿದ್ದ ₹50 ಕೋಟಿ ಅನುದಾನದಲ್ಲಿ ₹10 ಕೋಟಿ ನಗರದ ರಸ್ತೆಗಳ ಅಭಿವೃದ್ಧಿಗೆ ಬಳಸಿ ಕೊಳ್ಳಲಾಗುತ್ತದೆ. ಜೊತೆಗೆ ಲೋಕೋಪಯೋಗಿ ಇಲಾಖೆಯಿಂದ ₹2.50 ಕೋಟಿ ಬಿಡುಗಡೆಯಾಗಿದೆ. ಈ ಅನುದಾನಗಳಲ್ಲಿ ರಸ್ತೆಗಳ ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದು ಹೇಳಿದರು.ನವೆಂಬರ್ ತಿಂಗಳ ಅಂತ್ಯದೊಳಗೆ ನಗರದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತೇವೆ. ಡಿ. 1 ರಿಂದಲೇ ಕಾಮಗಾರಿ ಆರಂಭಿಸುತ್ತೇವೆ. ಮುಂದಿನ ಮಾರ್ಚ್ ತಿಂಗಳು ಮುಗಿಯುವ ಒಳಗಾಗಿ ಎಲ್ಲಾ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿ ಪ್ರತಿಯೊಂದು ರಸ್ತೆ ಉದ್ಘಾಟನೆ ಕಾರ್ಯ ನೆರವೇರಿಸುತ್ತೇವೆ ಎಂದರು.ನಗರಸಭೆ ವ್ಯಾಪ್ತಿಯ ಟಿಪ್ಪು ನಗರ ಬಡಾವಣೆ ವ್ಯಾಪ್ತಿಯಲ್ಲಿ ಸುಮಾರು ₹70 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇದಲ್ಲದೆ ನಗರದ ಪ್ರತಿಯೊಂದು ಬಡಾವಣೆಯಲ್ಲೂ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇವೆ ಎಂದು ಹೇಳಿದರು.ಹಿಂದೆ ಕ್ಷೇತ್ರದ ಶಾಸಕರಾದವರು ಸ್ಲಂ ಬೋರ್ಡ್ ನಿಂದ 800 ಮನೆಗಳ ನಿರ್ಮಾಣ ಕಾಮಗಾರಿಗೆ ಮಂಜೂರಾತಿ ಕೊಡಿಸಿ ದ್ದರು. ಆದರೆ, ಸೂಕ್ತ ಅನುದಾನ ಬಿಡುಗಡೆಯಾಗಿರಲಿಲ್ಲ. ಹೀಗಾಗಿ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಇದರಿಂದ ಅನಿವಾರ್ಯ ವಾಗಿ ಸ್ಲಂ ನಿವಾಸಿಗಳು ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿತ್ತು. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ನಿವಾಸಿ ಗಳು ದೂರು ನೀಡಿದ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದೇನೆ. ಶೀಘ್ರವೇ ಜಿಲ್ಲಾಧಿಕಾರಿ ನೇತೃತ್ವ ದಲ್ಲಿ ವಸತಿ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ಚಿಕ್ಕಮಗಳೂರಿನಲ್ಲಿಯೇ ನಡೆಸಿ ಮನೆಗಳ ನಿರ್ಮಾಣ ಕಾರ್ಯ ಪೂರ್ಣ ಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪಡೆದಿರುವ ಗುತ್ತಿಗೆದಾರರು ನಿಗದಿತ ಅವಧಿ ಒಳಗೆ ಗುಣಮಟ್ಟದ ರಸ್ತೆ ಕಾಮಗಾರಿ ನಡೆಸಿ ಜನರಿಗೆ ಅನುಕೂಲ ಒದಗಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಲಲಿತಾ ರವಿನಾಯ್ಕ್, ಸದಸ್ಯರಾದ ರೂಪ ಕುಮಾರ್, ಎ.ಸಿ.ಕುಮಾರ್, ಗೋಪಿ, ಪರಮೇಶ್ ರಾಜ್ ಅರಸ್, ಲಕ್ಷ್ಮಣ್, ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಸಿಡಿಎ ಅಧ್ಯಕ್ಷ ನಯಾಜ್ ಅಹಮದ್, ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಮಲ್ಲೇಶ್ ಸ್ವಾಮಿ, ಕಾಂಗ್ರೆಸ್ ಮುಖಂಡರಾದ ಬೆಟ್ಟಗೆರೆ ಪ್ರವೀಣ್, ಶ್ರೀಕಾಂತ್, ಹಿರೇಮಗಳೂರು ರಾಮಚಂದ್ರ ಹಾಜರಿದ್ದರು. 16 ಕೆಸಿಕೆಎಂ 5ಚಿಕ್ಕಮಗಳೂರಿನ ಗಾಂಧಿನಗರ ಆಟೋ ನಿಲ್ದಾಣದ ಬಳಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್.ಡಿ. ತಮ್ಮಯ್ಯ ಭಾನುವಾರ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಉಪಾಧ್ಯಕ್ಷೆ ಲಲಿತಾ ರವಿನಾಯ್ಕ್, ಪೌರಾಯುಕ್ತ ಬಿ.ಸಿ. ಬಸವರಾಜ್ ಇದ್ದರು.
;Resize=(128,128))
;Resize=(128,128))