ರಾಮನಗರ: ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿಯಡಿ (ಯುಐಡಿಎಫ್) ನಗರದ ವಿವಿಧೆಡೆ ನಡೆದಿರುವ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳು ತೃಪ್ತಿ ತಂದಿಲ್ಲ. ಗುಣಮಟ್ಟದ ಕಾಮಗಾರಿ ಮಾಡದ ಹೊರತು ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದಂತೆ ನಗರಸಭೆ ಆಯುಕ್ತರಿಗೆ ಸೂಚಿಸಿರುವುದಾಗಿ ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು

ರಾಮನಗರ: ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿಯಡಿ (ಯುಐಡಿಎಫ್) ನಗರದ ವಿವಿಧೆಡೆ ನಡೆದಿರುವ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳು ತೃಪ್ತಿ ತಂದಿಲ್ಲ. ಗುಣಮಟ್ಟದ ಕಾಮಗಾರಿ ಮಾಡದ ಹೊರತು ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದಂತೆ ನಗರಸಭೆ ಆಯುಕ್ತರಿಗೆ ಸೂಚಿಸಿರುವುದಾಗಿ ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ತಾಲೂಕಿನ ಬಿಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮುಂಡಿಪುರದ ಸಂಜೀವಿನಿ ಗಾರ್ಡನ್‌ನಲ್ಲಿ ಮಂಗಳವಾರ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಶಾಸಕರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸುಮಾರು 82 ಕೋಟಿ ಯುಐಡಿಎಫ್ ಅನುದಾನದಲ್ಲಿ ನಗರದಾದ್ಯಂತ ಕಾಂಕ್ರೀಟ್ ರಸ್ತೆ, ಚರಂಡಿ ಹಾಗೂ ತಡೆಗೋಡೆ ಕಾಮಗಾರಿಗಳನ್ನು ಎರಡು ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಎರಡೂ ಹಂತದಲ್ಲಿ ಇದುವರೆಗೆ ಶೇ.60ರಷ್ಟು ಕಾಮಗಾರಿಗಳು ಮುಗಿದಿವೆ. ಅದ್ಯಾವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಯುಐಡಿಎಫ್ ಅನುದಾನದಲ್ಲಿಯೇ ಸೀರಳ್ಳಕ್ಕೆ

18 ಕೋಟಿ ರುಪಾಯಿ ವೆಚ್ಚದಲ್ಲಿ ತಡೆಗೋಡೆ ಸಹ ನಿರ್ಮಾಣ ಮಾಡಲಾಗಿದೆ. ಹಲವು ವಾರ್ಡ್‌ಗಳಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಕೆಲಸಗಳು ನಡೆದಿವೆ. ಆದರೆ, ನನಗೆ ಆ ಕೆಲಸಗಳು ಸಮಾಧಾನ ತಂದಿಲ್ಲ. ಹಾಗಾಗಿ ಗುಣಮಟ್ಟದ ಕಾಮಗಾರಿ ಮಾಡಿಸಬೇಕು. ಅಲ್ಲಿಯವರೆಗೆ ಗುತ್ತಿಗೆದಾರರಿಗೆ ಬಿಲ್‌ಗಳನ್ನು ಮಾಡದಂತೆ ನಗರಸಭೆ ಆಯುಕ್ತರು ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಕುಡಿಯುವ ನೀರು ಬಗೆಹರಿಸಲು ಕ್ರಮ:

ಬೇಸಿಗೆ ಸಮಯ ಆಗಿರುವುದರಿಂದ ಹಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದು, ಅವರ ಜೊತೆ ನಾನು ಸಹ ಸಮಸ್ಯೆ ಬಗೆಹರಿಸಲು ಶ್ರಮಿಸುತ್ತಿದ್ದೇನೆ ಎಂದು ತಿಳಿಸಿದರು.

ಕಸಬಾ ಮತ್ತು ಕೈಲಂಚಾ ಹೋಬಳಿಗೆ ಒಂದು ಬೋರ್‌ವೆಲ್ ಮತ್ತು ಹಾರೋಹಳ್ಳಿ, ಮರಳವಾಡಿ ಹೋಬಳಿಗಳಲ್ಲಿ ಒಂದು ಬೋರ್‌ವೆಲ್ ಕೆಲಸ ನಿರ್ವಹಿಸುತ್ತಿವೆ. ಅಚ್ಚಲು, ಲಕ್ಕೋಜನಹಳ್ಳಿ, ಗದಗಯ್ಯನದೊಡ್ಡಿ, ಹಗಲಹಳ್ಳಿ, ಕಗ್ಗಲಹಳ್ಳಿಯಲ್ಲಿ ಬೋರ್‌ವೆಲ್ ಕೊರೆದು ಜನರಿಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ವಹಿಸಿದ್ದೇನೆ ಎಂದು ಇಕ್ಬಾಲ್ ಹುಸೇನ್ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂಜೀವಿನಿ ಗಾರ್ಡನ್ ವಾಸ ಮಾಡಲು ಯೋಗ್ಯವಾದ ಉತ್ತಮ ವಾತಾವರಣ ಹೊಂದಿರುವ ಬಡಾವಣೆಯಾಗಿದೆ. ಆದರೆ, ಈ ಬಡಾವಣೆಯಲ್ಲಿ ರಸ್ತೆ, ಯುಜಿಡಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಿರುವ ಅಗತ್ಯವಿದೆ. ಸರ್ಕಾರದಿಂದ ಲಭ್ಯವಾಗಿರುವ 2 ಕೋಟಿ ಅನುದಾನದಲ್ಲಿ ಸಂಜೀವಿನಿ ಗಾರ್ಡನ್‌ನಲ್ಲಿ 9 ರಸ್ತೆಗಳು ಮತ್ತು ಬಡಾವಣೆಯ ಮುಖ್ಯ ರಸ್ತೆಯನ್ನು ಅಭಿವೃದ್ದಿಪಡಿಸಲಾಗುತ್ತಿದ್ದು, ನಾಳೆಯಿಂದಲೇ ಕೆಲಸ ಆರಂಭವಾಗಲಿದೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

ಇದೇ ವೇಳೆ ಸಂಜೀವಿನಿ ಗಾರ್ಡನ್ ಮತ್ತು ನಿಸರ್ಗ ಬಡಾವಣೆಗಳಿಗೆ ಸಾರಿಗೆ ಬಸ್ಸು ವ್ಯವಸ್ಥೆ ಕಲ್ಪಿಸುವಂತೆ ಶಾಸಕರಿಗೆ ಎರಡು ಬಡಾವಣೆಗಳ ನಿವಾಸಿಗಳು ಮನವಿ ಸಲ್ಲಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ ಕುಮಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್.ರಾಜು, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಬಗರ್ ಹುಕುಂ ಸಾಗುವಳಿ ಸದಸ್ಯ ರವಿ, ಯುವ ಮುಖಂಡರಾದ ನವೀನ್‌ನಾಗಣ್ಣ, ಬಿ.ಆರ್.ಸುನಿಲ್‌ಕುಮಾರ್, ವಸೀಂ, ಬಿಳಗುಂಬ ಗ್ರಾಪಂ ಮಾಜಿ ಅಧ್ಯಕ್ಷ ನವೀನ್‌ಗೌಡ, ಮಾಜಿ ಉಪಾಧ್ಯಕ್ಷ ಕೆಂಚೇಗೌಡ, ಮಾಜಿ ಸದಸ್ಯ ಶಿವಲಿಂಗಯ್ಯ, ವೆಂಕಟಪ್ಪ, ಪಿಡಿಓ ಎಂ.ಹೆಚ್.ಮಹೇಶ್, ಕಾರ್ಯದರ್ಶಿ ತಿಮ್ಮಯ್ಯ, ಮುಖಂಡರಾದ ಕೃಷ್ಣ, ನಾಗರಾಜು, ಕೆ.ಸತೀಶ್, ರಾಜಶೇಖರ್, ಬೈರ್ನಳ್ಳಿ ಶಿವರಾಂ, ಸುಂದರ್, ರವಿ, ಧನಂಜಯ್ಯ, ರಾಜಣ್ಣ, ತಿಬ್ಬಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

(ಫೋಟೋ ಕ್ಯಾಫ್ಷನ್‌)

ರಾಮನಗರ ತಾಲೂಕಿನ ಬಿಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮುಂಡಿಪುರದ ಸಂಜೀವಿನಿ ಗಾರ್ಡನ್‌ನಲ್ಲಿ ಮಂಗಳವಾರ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಇಕ್ಬಾಲ್‌ ಹುಸೇನ್‌ ಭೂಮಿಪೂಜೆ ನೆರವೇರಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್‌ ಕುಮಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜು ಇತರರಿದ್ದರು.