ಬೆನ್ನು ನೋವು ಮತ್ತು ಕಾಲಿನ ಸ್ನಾಯುಗಳ ಸೆಳೆತದಿಂದ ಬಳಲುತ್ತಿದ್ದು, ನಡೆದಾಡಲು ಕಷ್ಟಪಡುತ್ತಿದ್ದ 49 ವರ್ಷ ಪ್ರಾಯದ ಮಹಿಳೆಗೆ ಇಲ್ಲಿನ ಉಜಿರೆಯ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗುಣಪಡಿಸಲಾಗಿದೆ.
ಬೆಳ್ತಂಗಡಿ: ಬೆನ್ನು ನೋವು ಮತ್ತು ಕಾಲಿನ ಸ್ನಾಯುಗಳ ಸೆಳೆತದಿಂದ ಬಳಲುತ್ತಿದ್ದು, ನಡೆದಾಡಲು ಕಷ್ಟಪಡುತ್ತಿದ್ದ 49 ವರ್ಷ ಪ್ರಾಯದ ಮಹಿಳೆಗೆ ಇಲ್ಲಿನ ಉಜಿರೆಯ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗುಣಪಡಿಸಲಾಗಿದೆ.
ಇಲ್ಲಿನ ಬೆನ್ನುಮೂಳೆಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಶತಾನಂದ ಪ್ರಸಾದ್ ರಾವ್ ಸೂಚನೆಯಂತೆ ರೋಗಿಯನ್ನು ಎಂ.ಆರ್.ಐ ಸ್ಕ್ಯಾನಿಂಗ್ ಪರೀಕ್ಷೆಗೆ ಒಳಪಡಿಸಿದಾಗ ಡಿ 11 ಬೆನ್ನುಮೂಳೆಯಲ್ಲಿ ದ್ರವ ತುಂಬಿದ ಚೀಲಗಳು (ಅರಕ್ಷಾಯಿಡ್ ಸಿಸ್ಟ್) ಪತ್ತೆಯಾಗಿತ್ತು. ಎಂಡೋಸ್ಕೋಪಿಕ್ ಸ್ಟೈನ್ ಸರ್ಜರಿಯಲ್ಲಿ ಫೆಲೋಶಿಪ್ ಪಡೆದಿರುವ ಖ್ಯಾತ ಬೆನ್ನು ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ. ಮಹೇಶ್ ಕೆ., ಅವರು ಈ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದರು. ಡಾ. ಮಹೇಶ್ ಕೆ. ಬೆನ್ನುಹುರಿಯ ದ್ರವ ತುಂಬಿದ ಚೀಲಗಳನ್ನು ಎಂಡೋಸ್ಕೋಪಿ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವಿಶ್ವದ ಮೊದಲ ಸರ್ಜನ್ ಎಂದು ಖ್ಯಾತಿ ಪಡೆದಿದ್ದಾರೆ.ಇವರೊಂದಿಗೆ ಉಜಿರೆಯ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಬೆನ್ನುಮೂಳೆಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಶತಾನಂದ ಪ್ರಸಾದ್ ರಾವ್, ಅರೆವಳಿಕೆ ತಜ್ಞರಾದ ಡಾ. ಚೈತ್ರಾ ಆರ್ ನೇತೃತ್ವದ ತಜ್ಞ ವೈದ್ಯರ ತಂಡ ಸಹಕರಿಸಿದರು. ಡಾ. ಮಹೇಶ್ ಕೆ., ಅವರು ಶಸ್ತ್ರಚಿಕಿತ್ಸೆಯ ವಿಧಾನವನ್ನು ವಿವರಿಸುತ್ತಾ, ಸಂಪೂರ್ಣ ಎಂಡೋಸ್ಕೋಪಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ಕೇವಲ 8 ಮಿ.ಮೀ ಛೇದನದೊಂದಿಗೆ 2 ಸೆ.ಮೀ ಗಾತ್ರದ ದ್ರವ ತುಂಬಿದ ಚೀಲಗಳನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ.ಎಂಡೋಸ್ಕೋಪಿಕ್ ಸರ್ಜರಿ ಮಾಡುವುದರಿಂದ ರೋಗಿಯು ಶಸ್ತ್ರಚಿಕಿತ್ಸೆ ಸಮಯದಲ್ಲಿ ಮತ್ತು ನಂತರವೂ ಕಡಿಮೆ ನೋವನ್ನು ಹೊಂದಿರುತ್ತಾರೆ. ಈ ಚಿಕಿತ್ಸೆ ಬಳಿಕ ರೋಗಿಯು ಕೇವಲ ಒಂದೇ ದಿನದಲ್ಲಿ ಡಿಸ್‌ಚಾರ್ಜ್ ಕೂಡ ಆಗಿದ್ದಾರೆ. ಚೇತರಿಕೆಯಾಗಿದ್ದು, ಸಂಪೂರ್ಣ ಪ್ರಸ್ತುತ ರೋಗಿಯ ಆರೋಗ್ಯದಲ್ಲಿ ಗುಣಮುಖರಾಗಿದ್ದಾರೆ ಎಂದರು.
ಇದೇ ವೈದ್ಯರ ತಂಡ ಈ ಹಿಂದೆ ಇದೇ ಆಸ್ಪತ್ರೆಯಲ್ಲಿ ಇಂಟ್ರಾ ಡ್ಯೂರಲ್ ಸ್ಟೈನಲ್ ಟ್ಯೂಮರ್ ಶಸ್ತ್ರಚಿಕಿತ್ಸೆ ಮತ್ತು ಯಶಸ್ವಿ ಡ್ಯೂರಲ್ ದುರಸ್ತಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಡಾ. ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಲ್ಲಿ, ನುರಿತ ತಜ್ಞ ವೈದ್ಯರ ತಂಡದಿಂದ ಇಲ್ಲಿ ಹಲವಾರು ಯಶಸ್ವಿ ಶಸ್ತ್ರಚಿಕಿತ್ಸೆಗಳು ನಡೆಯುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.