ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಳ ಬ್ರಹ್ಮಕಲಶೋತ್ಸವದ ಹೊರೆಕಾಣಿಕೆ ಉಗ್ರಾಣ ತರಕಾರಿ, ಧಾನ್ಯ, ಅನ್ನಸಂತರ್ಪಣೆಗೆ ಬಳಸುವ ವಸ್ತುಗಳಿಂದ ತುಂಬಿ ತುಳುಕುತ್ತಿದೆ.
ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಳ ಬ್ರಹ್ಮಕಲಶೋತ್ಸವದ ಹೊರೆಕಾಣಿಕೆ ಉಗ್ರಾಣ ತರಕಾರಿ, ಧಾನ್ಯ, ಅನ್ನಸಂತರ್ಪಣೆಗೆ ಬಳಸುವ ವಸ್ತುಗಳಿಂದ ತುಂಬಿ ತುಳುಕುತ್ತಿದೆ. ಬ್ರಹ್ಮಕಲಶೋತ್ಸವದ ನಿಮಿತ್ತ ಹೊರೆಕಾಣಿಕೆ ಸಂಗ್ರಹಕಾರ್ಯ ಮಾರ್ಚ್ ೨ರಿಂದ ೧೦ರವರೆಗೆ ನಡೆಯಲಿದೆ.
ಅನ್ಯ ಧರ್ಮೀಯರಿಂದಲೂ ಕಾಣಿಕೆ: ಮೊದಲ ದಿನವೇ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದೊಡ್ಡ ಮಟ್ಟದಲ್ಲಿ ಹೊರೆಕಾಣಿಕೆ ಸಮರ್ಪಣೆಯಾಗಿತ್ತು. ಇದರೊಂದಿಗೆ ಉಜಿರೆ, ಲಾಯಿಲ ಅಳದಂಗಡಿ ಸೇರಿದಂತೆ ತಾಲೂಕಿನ ವಿವಿಧ ಭಾಗ, ಹಳ್ಳಿಗಳಿಂದಲೂ ಹೊರೆಕಾಣಿಕೆ ಹರಿದುಬಂತು. ಉಜಿರೆ ಸುತ್ತಮುತ್ತಲಿನ ಪ್ರತಿ ಮನೆಮನೆಯಿಂದ ತರಕಾರಿ ಇತ್ಯಾದಿ ಉತ್ಪನ್ನಗಳು ಹೊರೆಕಾಣಿಕೆ ರೂಪದಲ್ಲಿ ಬಂದಿದೆ. ಕೇವಲ ಹಿಂದೂ ಬಾಂಧವರಷ್ಟೇ ಅಲ್ಲದೆ, ಕ್ರೈಸ್ತ ಮತ್ತು ಮುಸ್ಲಿಂ ಬಾಂಧವರು ಕೂಡ ಟ್ರ‍್ಯಾಕ್ಟರ್‌ಗಳಲ್ಲಿ ತರಕಾರಿ ಹಾಗೂ ತಾವು ಸ್ವತಃ ಬೆಳೆದ ಆಹಾರ ಧಾನ್ಯಗಳನ್ನು ಹೊತ್ತು ತಂದು ಸೌಹಾರ್ದತೆಗೆ ಸಾಕ್ಷಿಯಾದರು. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಭತ್ತ, ಇತರ ಧಾನ್ಯಗಳು ಹಾಗೂ ಅಡಿಕೆಯನ್ನು ಕಾಣಿಕೆಯಾಗಿ ನೀಡಿದರು. ಕೃಷಿ ಭೂಮಿ ಇಲ್ಲದವರು ಅಥವಾ ಕೃಷಿ ಮಾಡದವರು ತಮ್ಮ ಶಕ್ತಿಗೆ ಅನುಗುಣವಾಗಿ ವಸ್ತುಗಳನ್ನು ಖರೀದಿಸಿ ಸಮರ್ಪಿಸಿದರು. ಕೊಪ್ಪರಿಗೆ ಸೇವೆ: ಈ ಬಾರಿ ಬ್ರಹ್ಮಕಲಶೋತ್ಸವದ ವಿಶೇಷವಾಗಿ ಕೊಪ್ಪರಿಗೆ ಸೇವೆ ಹಮ್ಮಿಕೊಳ್ಳಲಾಗಿದೆ. ಅನ್ನಸಂತರ್ಪಣೆಗೆ ದೇಣಿಗೆ ನೀಡುವ ಭಕ್ತರಿಗೆ ಸಮಿತಿಯಿಂದ ರಶೀದಿ ನೀಡಲಾಗುತ್ತದೆ. ಬಳಿಕ ಅರ್ಚಕರು ಸಂಕಲ್ಪ ಮಾಡಿ, ಹರಿವಾಣದಲ್ಲಿನ ಅಕ್ಕಿಯನ್ನು ಭಕ್ತರ ಹೆಸರಿನಲ್ಲಿ ಕೊಪ್ಪರಿಗೆಯಲ್ಲಿ ಅರ್ಪಿಸುತ್ತಾರೆ. ಇದರಿಂದ ಭಕ್ತರು ಅನ್ನಸೇವೆಯಲ್ಲಿ ಭಾಗಿಯಾದ ತೃಪ್ತಿಯನ್ನು ಹೊಂದುತ್ತಾರೆ. ಈ ಕಾರ್ಯದ ಪ್ರಧಾನ ಸಂಚಾಲಕರಾಗಿ ರವಿಕುಮಾರ್ ಬರೆಮೇಲು ಕಾರ್ಯನಿರ್ವಹಿಸುತ್ತಿದ್ದಾರೆ. ಹೊರೆಕಾಣಿಕೆ ಸಮರ್ಪಣೆ ಭಕ್ತಾದಿಗಳಿಗೆ ಆತ್ಮತೃಪ್ತಿಯನ್ನು ನೀಡುತ್ತದೆ ರವಿಕುಮಾರ್ ತಿಳಿಸಿದರು.