ಉಕ್ಕಡಗಾತ್ರಿ ಶ್ರೀ ಕರಿಬಸವೇಶ್ವರ ರಥೋತ್ಸವ ಸಂಪನ್ನ

| Published : Mar 03 2025, 01:45 AM IST

ಸಾರಾಂಶ

ಇಲ್ಲಿಗೆ ಸಮೀಪದ ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿಯ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶನಿವಾರ ವೈಭವದಿಂದ ನೆರವೇರಿತು.

- ೨೦೦ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಿ ಭದ್ರತೆ

- ಸ್ವಚ್ಛತಾ ಕಾರ್ಯ ಕೈಗೊಳ್ಳಲು ೬೦ ಯುವಕರ ನೇಮಕ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು ಇಲ್ಲಿಗೆ ಸಮೀಪದ ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿಯ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶನಿವಾರ ವೈಭವದಿಂದ ನೆರವೇರಿತು.

ಸ್ವಾಮಿಯ ಉತ್ಸವ ಮೂರ್ತಿಯನ್ನು ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿ, ರಥದಲ್ಲಿ ಪ್ರತಿಷ್ಠಾಪಿಸಿ, ನಂದಿಗುಡಿ ಸಿದ್ದರಾಮೇಶ್ವರ ಶ್ರೀಗಳಿಂದ ಪೂಜೆ ನೆರವೇರಿಸಲಾಯಿತು. ನಂತರ ರಥೋತ್ಸವಕ್ಕೆ ಚಾಲನೆ ದೊರಕಿತು. ರಾಜ್ಯದ ವಿವಿಧ ಜಿಲ್ಲೆಗಳು, ಆಂಧ್ರ, ತಮಿಳುನಾಡು, ಕೇರಳ ಮತ್ತಿತರೆ ರಾಜ್ಯಗಳ ಅಪಾರ ಭಕ್ತರು ಪಾಲ್ಗೊಂಡಿದ್ದರು. ರಥದ ಬಳಿ ಭಕ್ತರ ಜಮಾವಣೆ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಗ್ರಾಮದ ಪಕ್ಕದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಭಕ್ತರು ಸ್ನಾನ ಮಾಡಿ ನಂತರ ಸ್ವಾಮಿಯ ದರ್ಶನ ಮಾಡಿದರೆ, ಕೆಲವರು ನದಿ ದಂಡೆಯಲ್ಲಿಯೇ ಸ್ವಾಮಿಯ ಫೋಟೋಗೆ ಪೂಜೆಗೈದು ನಮಿಸಿ, ಖಾರಾ ಮಂಡಕ್ಕಿ, ಬುತ್ತಿ ಪ್ರಸಾದ ಸವಿದರು. ಕ್ಷೇತ್ರಕ್ಕೆ ಭಕ್ತರು ಪಾದಯಾತ್ರೆಯಲ್ಲಿ, ವಾಹನಗಳಲ್ಲಿ ಆಗಮಿಸಿದ್ದರು.

ಸ್ನಾನಘಟ್ಟದಲ್ಲಿ ಬಟ್ಟೆ ಬದಲಾಯಿಸಲು ಆಡಳಿತ ಮಂಡಳಿ ತಗಡಿನ ಶೆಡ್ ನಿರ್ಮಾಣ ಮಾಡಿದ್ದರು. ಆಡಳಿತ ಮಂಡಳಿ ಸದಸ್ಯರು ವಿವಿಧ ದಿಕ್ಕುಗಳಲ್ಲಿ ತಮ್ಮ ಜವಾಬ್ದಾರಿಯ ಉಸ್ತುವಾರಿ ವಹಿಸಿದ್ದರು. ಮಕ್ಕಳು ಮತ್ತು ಪರ್ಸ್ ಕಾಣೆಯಾದ ಬಗ್ಗೆ ಭಕ್ತರು ಪೋಲಿಸರಿಗೆ ಮೌಖಿಕ ದೂರು ನೀಡುವುದು ಕಂಡುಬಂತು.

ರಥಕ್ಕೆ ಕಾಯಿ ಒಡೆಯಲು ಭಕ್ತರು ಹಾತೊರೆಯುವ ದೃಶ್ಯ ಸಾಮಾನ್ಯವಾಗಿತ್ತು. ಭಕ್ತರ ಜಯಘೊಷ ಮುಗಿಲು ಮುಟ್ಟಿತ್ತು. ಜನಪದ ಕಲೆಗಳ ಕೀಲಿಕುದುರೆ, ಡೊಳ್ಳು ಕುಣಿತ, ನಂದಿ ಕೋಲು, ವೀರಗಾಸೆ, ಜಾಂಜ್ ಮೇಳ ಮುಂತಾದ ಕಲಾತಂಡಗಳು ಜಾತ್ರೆಗೆ ಮೆರುಗು ನೀಡಿದವು. ಡೊಳ್ಳು ಮತ್ತು ಹಲಗೆ ಶಬ್ದಕ್ಕೆ ಕೆಲ ಭಕ್ತರು ಕುಣಿಯುವ ದೃಶ್ಯ ವಿಶೇಷವಾಗಿತ್ತು. ಭಕ್ತರು ರಥಕ್ಕೆ ಬಾಳೆ ಹಣ್ಣು ಎಸೆದರು.

ಸ್ವಚ್ಚತಾ ಕಾರ್ಯಕ್ಕೆ ೬೦ ಯುವಕರನ್ನು ಟ್ರಸ್ಟ್ ನೇಮಕ ಮಾಡಿತ್ತು. ೨೦೦ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸಿ, ಭದ್ರತೆ ಕೈಗೊಳ್ಳಲಾಗಿತ್ತು. ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಿತ್ತು. ತುಮಕೂರು ಭಕ್ತರಾದ ಬಸವರಾಜಪ್ಪ, ಮಹದೇವಯ್ಯ ಕುಟುಂಬ ಸಾವಿರಾರು ಭಕ್ತರಿಗೆ ಪ್ರತ್ಯೇಕ ಅನ್ನ ಸಂತರ್ಪಣೆ ಮಾಡಿ ಬಡಿಸಿದರೆ, ಟ್ರಸ್ಟ್‌ನಿಂದಲೂ ದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು. ವೃತ್ತ ನಿರೀಕ್ಷಕ ಸುರೇಶ್ ಸಗರಿ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

- - - -೨ಎಂಬಿಆರ್೧: ಉಕ್ಕಡಗಾತ್ರಿಯಲ್ಲಿ ಶನಿವಾರ ಶ್ರೀ ಕರಿಬಸವೇಶ್ವರ ರಥೋತ್ಸವ ಜರುಗಿತು.