ಧನ ಸಂಪತ್ತಿಗಿಂತ ಭಕ್ತಿ ಮತ್ತು ಜ್ಞಾನ ಸಂಪತ್ತೇ ಶ್ರೇಷ್ಠವಾದದ್ದು ಎಂದು ನಂಬಿದ್ದ ಕನಕದಾಸರ ಕೀರ್ತನೆಗಳಲ್ಲಿ ಭಕ್ತಿಯೊಂದಿಗೆ ಸಾಮಾಜಿಕ ಹಾಗೂ ವೈಜ್ಞಾನಿಕ ಪ್ರಜ್ಞೆಗಳ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಸಹ ನಿರ್ದೇಶಕ ಡಾ. ಬಿ.ಎಸ್.‌ ಅನಿಲಕುಮಾರ ಬೊಮ್ಮಾಘಟ್ಟ ಅವರು ಹೇಳಿದರು.

ಉಳ್ಳಾಲ: ಧನ ಸಂಪತ್ತಿಗಿಂತ ಭಕ್ತಿ ಮತ್ತು ಜ್ಞಾನ ಸಂಪತ್ತೇ ಶ್ರೇಷ್ಠವಾದದ್ದು ಎಂದು ನಂಬಿದ್ದ ಕನಕದಾಸರ ಕೀರ್ತನೆಗಳಲ್ಲಿ ಭಕ್ತಿಯೊಂದಿಗೆ ಸಾಮಾಜಿಕ ಹಾಗೂ ವೈಜ್ಞಾನಿಕ ಪ್ರಜ್ಞೆಗಳ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಸಹ ನಿರ್ದೇಶಕ ಡಾ. ಬಿ.ಎಸ್.‌ ಅನಿಲಕುಮಾರ ಬೊಮ್ಮಾಘಟ್ಟ ಅವರು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಪೀಠ ಮತ್ತು ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ. ಬಿ.ಎ. ವಿವೇಕ ರೈ ವಿಚಾರ ವೇದಿಕೆಯಲ್ಲಿ ಬುಧವಾರ ನಡೆದ ‘ಕನಕ ಸ್ಮೃತಿ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಕನಕ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.ಕನಕದಾಸರು ಜಾತಿಮತ ಮಾತ್ರವಲ್ಲ ಪ್ರಾಂತ್ಯವನ್ನು ಮೀರಿ ಕೆಲಸ ಮಾಡಿದವರು. ಅವರನ್ನು ಕೇವಲ ದಾಸರಾಗಿ,‌ ಸಾಹಿತ್ಯದ ರಚನಕಾರರಾಗಿ ಮಾತ್ರ ನಾವು ನೋಡದೆ ವೈಜ್ಞಾನಿಕ ಅನ್ವೇಷಣಾಕಾರರಾಗಿಯೂ ನೋಡಬಹುದು. ಅವರು ಅಂದಿನ ಕಾಲದಲ್ಲಿ 68 ಕೆರೆಗಳನ್ನು ಕಟ್ಟಿಸಿದ ದಾಖಲೆಗಳು ನಮಗೆ ಶಾಸನ ಸಮೇತ ಸಿಕ್ಕಿವೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್‌ ಧರ್ಮ ಮಾತನಾಡಿ, ಇಂದಿನ ಆಧುನಿಕತೆಯಲ್ಲಿ ಕಾಲಘಟ್ಟದಲ್ಲಿ ಕನಕದಾಸರಂತಹ ಮಹಾತ್ಮರ ಚಿಂತನೆ, ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ಎಡವುತ್ತಿದ್ದೇವೆ. ಸಮಾಜದಲ್ಲಿ ಕಟ್ಟಡಗಳೊಂದಿಗೆ ಜಾತಿ ಸಂಘಟನೆಗಳೂ ಗಟ್ಟಿಗೊಳ್ಳುತ್ತಿವೆ ಎಂದರು.ವಿದ್ವಾಂಸ ಕಬ್ಬಿನಾಲೆ ವಸಂತ ಭಾರಧ್ವಾಜ್ ಮಾತನಾಡಿ, ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮುಖ್ಯವಾದುದು. ದಾಸ ಸಾಹಿತ್ಯದ ಆತ್ಮ, ಒಳಗುಗಳನ್ನು ಅನ್ವೇಷಿಸಿ ಹೊಸ ಹೊಸ ಆವಿಷ್ಕಾರ, ಅಧ್ಯಯನಗಳು ಹೊರಬರಲಿ ಎಂದರು.ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ನಾಗಪ್ಪ ಗೌಡ ಆರ್. ಅಧ್ಯಕ್ಷತೆ ವಹಿಸಿದ್ದರು.ಆಶಯ ಭಾಷಣ ಮಾಡಿದ ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ ಧನಂಜಯ ಕುಂಬ್ಳೆ ಅಭಿವೃದ್ಧಿಯ ಓಟದಲ್ಲಿ ಬಾಹ್ಯ ಧಗೆ ಉಂಟಾಗಿದೆ. ಸ್ವಾರ್ಥ ಅಹಂಕಾರ, ಹಣದಿಂದ ಆಂತರಿಕ ಧಗೆ ಉಂಟಾಗಿದೆ. ಕನಕದಾಸರ ಕೀರ್ತನೆಗಳು ವರ್ತಮಾನದ ಈ ಧಗೆಗೆ ಮಾನವೀಯತೆಯ ತಂಪನ್ನೆರೆಯುವ ಶಕ್ತಿ ಹೊಂದಿದೆ ಎಂದರು.ಮಂಗಳೂರು ವಿವಿ ಕಲಾ ನಿಕಾಯದ ಡೀನ್ ಪ್ರೊ.ಸೋಮಣ್ಣ ಹೊಂಗಳ್ಳಿ ಹಾಜರಿದ್ದರು. ಸಂಶೋಧನಾ ವಿದ್ಯಾರ್ಥಿನಿ ಸಾಯಿಸುಮ ನಾವಡ ನಿರೂಪಿಸಿದರು.2025-26ನೇ ಸಾಲಿನ ಕನಕ ಕೀರ್ತನ ಗಂಗೋತ್ರಿ ಕಾರ್ಯಕ್ರಮದಲ್ಲಿ ವಿಜೇತರಾದ 16 ಅಭ್ಯರ್ಥಿಗಳಿಗೆ ಮತ್ತು ಆರು ತಂಡಗಳಿಗೆ ‘ಕನಕ ಪುರಸ್ಕಾರ ಪ್ರದಾನ ಮಾಡಲಾಯಿತು.