ಉಮಾ ವಿದ್ಯಾಲಯದ ಶತಮಾನೋತ್ಸವ ಅದ್ಧೂರಿ ಆಚರಣೆಗೆ ನಿರ್ಧಾರ

| Published : Oct 09 2025, 02:01 AM IST

ಸಾರಾಂಶ

ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, ನೂರು ವರ್ಷ ಪೂರೈಸುತ್ತಿರುವ ಪುರಸಭೆ ಉಮಾ ವಿದ್ಯಾಲಯ ಪ್ರೌಢಶಾಲೆ ಸಹಸ್ರಾರು ಜನರಿಗೆ ವಿದ್ಯೆ ನೀಡಿದೆ. ಕಲಿಸಿದ ಗುರುಗಳು ಮತ್ತು ಕಲಿತ ಶಾಲೆಯನ್ನೂ ಎಂದಿಗೂ ಮರೆಯಬಾರದು ಎಂದರು.

ಲಕ್ಷ್ಮೇಶ್ವರ: ಪಟ್ಟಣದಲ್ಲಿ 1926ರಲ್ಲಿ ಆರಂಭವಾಗಿ 2026ಕ್ಕೆ ನೂರು ವರ್ಷ ಪೂರೈಸಲಿರುವ ಪುರಸಭೆ ಉಮಾ ವಿದ್ಯಾಲಯ ಪ್ರೌಢಶಾಲೆಯ ಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಬುಧವಾರ ಇಲ್ಲಿನ ವೀರಗಂಗಾಧರ ರಂಭಾಪುರಿ ಸಮುದಾಯ ಭವನದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, ನೂರು ವರ್ಷ ಪೂರೈಸುತ್ತಿರುವ ಪುರಸಭೆ ಉಮಾ ವಿದ್ಯಾಲಯ ಪ್ರೌಢಶಾಲೆ ಸಹಸ್ರಾರು ಜನರಿಗೆ ವಿದ್ಯೆ ನೀಡಿದೆ. ಕಲಿಸಿದ ಗುರುಗಳು ಮತ್ತು ಕಲಿತ ಶಾಲೆಯನ್ನೂ ಎಂದಿಗೂ ಮರೆಯಬಾರದು. ಸಧ್ಯ ನಾವು ಕಲಿತ ಶಾಲೆ ಶತಮಾನೋತ್ಸವದ ಸಂಭ್ರಮದ ಹೊಸ್ತಿಲಲ್ಲಿ ಇರುವುದು ನಮಗೆಲ್ಲ ಸಂತಸದ ವಿಷಯ. ಕಾರಣ ಈವರೆಗೆ ಶಾಲೆಯಲ್ಲಿ ಓದಿದ ಎಲ್ಲ ಹಳೇ ವಿದ್ಯಾರ್ಥಿಗಳು ಸೇರಿ ಶತಮಾನೋತ್ಸವವನ್ನು ಸಡಗರದಿಂದ ಆಚರಿಸೋಣ ಎಂದರು.ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಒಂದು ಕಾಲದಲ್ಲಿ ಅತ್ಯಂತ ಉತ್ತುಂಗದಲ್ಲಿದ್ದ ನಮ್ಮ ಶಾಲೆ ಇಂದು ಮಕ್ಕಳಿಲ್ಲದೆ ಕೊರಗುತ್ತಿದೆ. ಇದಕ್ಕೆ ಹಲವು ಕಾರಣಗಳು ಇವೆ. ಅದರೊಂದಿಗೆ ಶಾಲೆ ಕಟ್ಟಡವೂ ಹಾಳಾಗಿದೆ. ಕಾರಣ ಈವರೆಗೆ ಹದಿನೈದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಅಕ್ಷರಾಭ್ಯಾಸ ಮಾಡಿದ್ದಾರೆ. ಎಲ್ಲರೂ ಕೂಡಿ ವಂತಿಗೆ ಸಂಗ್ರಹಿಸಿ ಶಾಲೆಯನ್ನು ದುರಸ್ತಿ ಮಾಡಿಸಿ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸೋಣ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು. ವಕೀಲ ಬಿ.ಎಸ್. ಬಾಳೇಶ್ವರಮಠ ಮಾತನಾಡಿ, ನಾವು ಕಲಿತ ಶಾಲೆ ನೂರು ವರ್ಷ ಪೂರೈಸಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಕಾರಣ ಶಾಲೆಯ ಶತಮಾನೋತ್ಸವವನ್ನು ಭರ್ಜರಿ ಆರಿಸುವುದು ನಮ್ಮ ಕರ್ತವ್ಯ ಎಂದರು.ಚನ್ನಪ್ಪ ಜಗಲಿ ಮಾತನಾಡಿ, ನಾವು ಅಭ್ಯಾಸ ಮಾಡಿದ ಶಾಲೆ ಕಟ್ಟಡ ಸಾಕಷ್ಟು ಶಿಥಿಲಗೊಂಡಿದ್ದು, ಮೊದಲು ಅದನ್ನು ದುರಸ್ತಿ ಮಾಡಿಸಲು ಕ್ರಮ ಕೈಗೊಳ್ಳಬೇಕು. ನಂತರ ಸಮಾರಂಭದ ಕುರಿತು ಸಮಿತಿಗಳನ್ನು ಮಾಡಿ ಆಯಾ ಸಮಿತಿಗೆ ಜವಾಬ್ದಾರಿ ಒಪ್ಪಿಸಬೇಕು ಎಂದರು.

ನಿವೃತ್ತ ಶಿಕ್ಷಕ, ಸಾಹಿತಿ ಪೂರ್ಣಾಜಿ ಖರಾಟೆ ಮಾತನಾಡಿದರು. ಡಿ.ಬಿ. ಬಳಿಗಾರ, ಬಸವೇಶ ಮಹಾಂತಶೆಟ್ಟರ, ಓಂಪ್ರಕಾಶ ಜೈನ, ಆರ್.ಸಿ. ಪಾಟೀಲ, ಬಸವರಾಜ ಬೆಂಡಿಗೇರಿ, ಸೋಮೇಶ ಉಪನಾಳ, ರಮೇಶ ನವಲೆ, ಎಸ್.ಎಫ್. ಆದಿ ಮತ್ತಿತರರು ಮಾತನಾಡಿದರು. ಶಾಲೆಯಲ್ಲಿ ಕಲಿತ ನೂರಾರು ಹಳೇ ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು.