ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರು ಅತ್ಯಧಿಕ ಮತಗಳಿಂದ ಆಯ್ಕೆಯಾಗಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರು ಅತ್ಯಧಿಕ ಮತಗಳಿಂದ ಆಯ್ಕೆಯಾಗಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ವಿಶ್ವಾಸ ವ್ಯಕ್ತಪಡಿಸಿದರು.ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.9ರಂದು ನಡೆದ ಬಾಗಲಕೋಟೆ ಉಪ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಮತ ಚಲಾಯಿಸಿದ್ದಾರೆ. ಮೇ 4ರಂದು ಫಲಿತಾಂಶ ಹೊರಬೀಳಲಿದ್ದು ಗೆಲುವು ನಮ್ಮದೆ ಎಂದರು.
ಉಪಚುನಾವಣೆ ಪ್ರಚಾರ ಕಾರ್ಯದಲ್ಲಿ 20 ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ ಜಾರಕಿಹೊಳಿ, ಆರ್.ಬಿ.ತಿಮ್ಮಾಪೂರ, ಎಂ.ಬಿ.ಪಾಟೀಲ, ರಾಮಲಿಂಗಾರೆಡ್ಡಿ, ಶಿವಾನಂದ ಪಾಟೀಲ, ಎಚ್.ಕೆ.ಪಾಟೀಲ, ಜಮೀರ್ ಅಹ್ಮದ ಖಾನ್, ರಹೀಂ ಖಾನ್, ಕೆ.ಎಚ್.ಮುನಿಯಪ್ಪ, ರಾಜ್ಯ ನಾಯಕರಾದ ಬಸವರಾಜ ರಾಯರೆಡ್ಡಿ, ನಜೀರ್ ಅಹ್ಮದ್, ಸೌಮ್ಯ ರಡ್ಡಿ, ವೀಣಾ ಕಾಶಪ್ಪನವರ, ಸಂಯುಕ್ತಾ ಪಾಟೀಲ, ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಮುಖಂಡರು, ಕೆಪಿಸಿಸಿ ಪದಾಧಿಕಾರಿಗಳು, ಅನೇಕ ಕಾರ್ಯಕರ್ತರು, ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡು ಕೆಲಸ ಮಾಡಿದ್ದಾರೆ ಅವರೆಲ್ಲರಿಗೂ ಹಾಗೂ ಮತದಾರರಿಗೆ ಕಾಂಗ್ರೆಸ್ ಪಕ್ಷದಿಂದ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.ಸಾಮೂಹಿಕ ನಾಯಕತ್ವದಲ್ಲಿ ಉಪ ಚುನಾವಣೆ ಮಾಡಲಾಗಿದ್ದು, ನಮ್ಮ ಪಕ್ಷದ ಅಭ್ಯರ್ಥಿ ಉಮೇಶ ಮೇಟಿ ಗೆಲುವು ಪಕ್ಕಾ ಆಗಿದ್ದು, ಪಕ್ಷದಲ್ಲಿ ಕೆಲವು ಗೊಂದಲಗಳು ನಿವಾರಿಸಿಕೊಂಡು ಮುನ್ನಡೆದು ಗೆಲುವಿನ ದಾಪುಗಾಲು ಹಾಕಿದ್ದೇವೆ. ಬಾಗಲಕೋಟೆ ವಿಧಾನಸಭಾ ಕ್ಷೇತ್ರವನ್ನು ಮತ್ತೆ ಉಳಿಸಿಕೊಳ್ಳುತ್ತೇವೆ ಎಂದರು.
ಕಮತಗಿ ಪಟ್ಟಣ ಪಂಚಾಯತಿಯ ಮಾಜಿ ಸದಸ್ಯರಾದ ರಮೇಶ ಜಮಖಂಡಿ ಹಾಗೂ ಗುರುಲಿಂಗಪ್ಪ ಪಾಟೀಲ ಅವರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಲು ಕೆಪಿಸಿಸಿಗೆ ಪತ್ರವನ್ನು ಬರೆಯಲಾಗಿದೆ ಎಂದು ನಂಜಯ್ಯನಮಠ ಹೇಳಿದರು.