ಚಿಕ್ಕೋಡಿ: ಸಾಲಗಾರರ ಕಾಟ ತಾಳಲಾರದೆ ವ್ಯಕ್ತಿಯೊಬ್ಬ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ನಿವಾಸಿ ವಿನಾಯಕ ಭಂಡಾರೆ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ. ಈತ ಆತ್ಮಹತ್ಯೆ ಯತ್ನಕ್ಕೂ ಮೊದಲು ವಿಡಿಯೋ ಮಾಡಿದ್ದು, ವಿಡಿಯೋದಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದಾನೆ. ತಾನು ಸಾಲ ಮಾಡಿ ಬಿಸಿನೆಸ್‌ ಮಾಡುತ್ತಿದ್ದು, ಬಿಸಿನೆಸ್ ಕೈಕೊಟ್ಟ ಹಿನ್ನೆಲೆಯಲ್ಲಿ ಸಾಕಷ್ಟು ಸಮಸ್ಯೆ ಅನುಭವಿಸಿದ್ದೇನೆ. ಸಾಲಗಾರರ ಕಾಟ ತಾಳಲಾಗುತ್ತಿಲ್ಲ. ಕೆಲ ಸಾಲಗಾರರು ಸಾಕಷ್ಟು ಹಿಂಸೆ ಕೊಡುತ್ತಿದ್ದಾರೆ. ಅದರಲ್ಲಿ ಬೆಳಗಾವಿಯ ಐವರು ವ್ಯಕ್ತಿಗಳ ಹೆಸರು ಬರೆದು, ಅವರ ವಿರುದ್ಧ ಆರೋಪ ಮಾಡಿದ್ದಾನೆ. ಅಲ್ಲದೇ, ಡೆತ್ ನೋಟ್‌ ಕೂಡ ಬರೆದಿಟ್ಟಿದ್ದು, ಪತ್ನಿ ಮತ್ತು ಮಕ್ಕಳಲ್ಲಿ ಕ್ಷಮೆ ಕೇಳಿದ್ದಾನೆ. ತೀವ್ರ ಅಸ್ವಸ್ಥಗೊಂಡಿರುವ ವಿನಾಯಕ ಭಂಡಾರೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.