ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಹೆರೂರಿನ ಗಿರಿಜನ ಹಾಡಿಯೊಳಗೆ ಅಕ್ರಮವಾಗಿ ಅನಧಿಕೃತ ಚರ್ಚ್‌ ಹೆಸರಿನಲ್ಲಿ ಕಟ್ಟಡ ನಿರ್ಮಿಸಿ ಉದ್ಘಾಟನೆಗೆ ಆಗಮಿಸಿದ ತಮಿಳುನಾಡು ಮೂಲದ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶನಿವಾರ ನೆರೆಯ ರಾಜ್ಯ ತಮಿಳುನಾಡುವಿನಿಂದ 2 -4 ಟಿಟಿ ವಾಹನಗಳಲ್ಲಿ ಆಗಮಿಸಿದ ವ್ಯಕ್ತಿಗಳು ಅಕ್ರಮ ಕಟ್ಟಡದಲ್ಲಿ ಟೇಪ್ ಕತ್ತರಿಸಿ ಉದ್ಘಾಟನೆಗೆ ಮುಂದಾಗಿದ್ದನ್ನು ಪ್ರಶ್ನಿಸಿದ ಸ್ಥಳೀಯ ಗ್ರಾಮಸ್ಥರೊಂದಿಗೆ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂದೋಡಿ ಜಗನ್ನಾಥ್, ಚಂದ್ರಶೇಖರ್ ಹೆರೂರು ಸೇರಿದಂತೆ ಗ್ರಾಮದ ಮುಖಂಡರು ಸುಂಟಿಕೊಪ್ಪ ಪೊಲೀಸ್‌ ಠಾಣೆ ಡಿವೈಎಸ್‌ಪಿ ಪಿ.ಚಂದ್ರಶೇಖರ್ ಗೆ ದೂರು ಸಲ್ಲಿಸಿದರು.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುಶಾಲನಗರ ವೃತ್ತ ನಿರೀಕ್ಷಕ ಪ್ರದೀಪ್‌ಕುಮಾರ್, ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್‌ ರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಕೂಡಲೇ ಚರ್ಚ್ ಬಳಿಯಲ್ಲಿದ್ದ 40ಕ್ಕೂ ಅಧಿಕ ಮಂದಿಯನ್ನು ವಾಹನ ಸಮೇತ ಪೊಲೀಸ್‌ಠಾಣೆಗೆ ಕರೆ ತಂದಿದ್ದು ದೂರು ದಾಖಲಿಸಿದರು.ಸ್ಥಳಕ್ಕೆ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಶ್ರೀಕಾಂತ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಸ್ಮ ಅವರು ಭೇಟಿ ನೀಡಿ ಪರಿಶೀಲಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಜಗನ್ನಾಥ್ ಮಾತನಾಡಿ, ಇದೊಂದು ಹೆರೂರು ಗ್ರಾಮಕ್ಕೆ ಆತಂಕಕಾರಿ ವಿಚಾರವಾಗಿದೆ. ಪರಿಶಿಷ್ಟ ಪಂಗಡಕ್ಕೆ ದೊರೆಯುವ ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಮತ್ತೊಂದು ಧರ್ಮದ ಪರಿಪಾಲನೆ ನಡೆಯುತ್ತಿದೆ. ಇಂತಹವರ ವಿರುದ್ಧ ಸಮಾಜ ಕಲ್ಯಾಣ ಇಲಾಖೆ ಕಟ್ಟುನಿಟ್ಟಿನ ಕ್ರಮವಹಿಸಬೇಕಿದೆ. ದಿಢೀರ್ ಬೆಳವಣಿಗೆಯಲ್ಲಿ ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ ಎಂದು ಭಾವಿಸಿದ ಕಟ್ಟಡವನ್ನು ಚರ್ಚ್ ನಿರ್ಮಿಸಿರುವುದು ಗ್ರಾಮಸ್ಥರನ್ನು ಭೀತಿಗೊಳಿಸುವ ಕಾರ್ಯತಂತ್ರವಾಗಿದೆ ಎಂದು ಜಗನ್ನಾಥ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇಲ್ಲಿಯ ತನಕ ಹೊರೂರು ನಡೆಯುತ್ತಿದ್ದ ಚಟುವಟಿಕೆಯು ಹೆರೂರು ಹಾಡಿಯೊಳಗೆ ನಡೆಸಲು ಪ್ರಯತ್ನಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಬಿಜೆಪಿ ಯುವ ಮುಖಂಡ ಹೆರೂರು ಚಂದ್ರಶೇಖರ್ ಹೇಳಿದರು. ಸುಂಟಿಕೊಪ್ಪ ಗ್ರೇಡ್ 1 ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಮಾತನಾಡಿ, ಸಂಬಂಧಿಸಿದ ಇಲಾಖೆ ಪೊಲೀಸ್ ಇಲಾಖೆಗೆ ಸೂಕ್ತ ದೂರನ್ನು ಸಲ್ಲಿಸುವ ಮೂಲಕ ಹಾಡಿಯಲ್ಲಿ ನಡೆದಿರುವ ಅಕ್ರಮ ಚಟುವಟಿಕೆಯ ಪೂರ್ಣ ವಿವರವನ್ನು ಸಾರ್ವಜನಿಕರ ಮುಂದೆ ಇಡಬೇಕು. ಇಲ್ಲದಿದ್ದಲ್ಲಿ ಕಾಲವಕಾಶ ನೀಡಿ ಪ್ರತಿಭಟನೆ ಹಮ್ಮಿಕೊಳ್ಳುವ ಬಗ್ಗೆ ಕೂಡ ಚಿಂತಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಹಾಡಿಯ ನಿವಾಸಿಗಳು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಯಾಯಿತು.