ಗ್ರಾಪಂಗಳಲ್ಲಿ ಸದಸ್ಯೆಯರ ಪತಿಗಳ ಅನಧಿಕೃತ ಪ್ರವೇಶ

| Published : Mar 20 2025, 01:19 AM IST

ಸಾರಾಂಶ

ಜಿಲ್ಲೆಯ ಹಲವು ಗ್ರಾಮ ಪಂಚಾಯ್ತಿಗಳಲ್ಲಿ ಮಹಿಳಾ ಸದಸ್ಯರ ಪತಿಯರು ಅನಧಿಕೃತವಾಗಿ ಗ್ರಾಮ ಪಂಚಾಯ್ತಿ ಆಡಳಿತದಲ್ಲಿ ತಲೆಹಾಕುತ್ತಿರುವುದು ಹಾಗೂ ಅಧಿಕಾರಿ, ಸಿಬ್ಬಂದಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಪ್ರಕರಣಗಳು ಆಗಿಂದಾಗ್ಯೆ ನಡೆಯುತ್ತಲೇ ಇವೆ. ಇಂತಹ ಪ್ರಕರಣಗಳ ತಡೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಬಂಡೆಕುಮಾರ್‌ ಜಿಲ್ಲಾ ಪಂಚಾಯ್ತಿ ಸಿಇಒ ಜಿ.ಪ್ರಭು ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯ ಹಲವು ಗ್ರಾಮ ಪಂಚಾಯ್ತಿಗಳಲ್ಲಿ ಮಹಿಳಾ ಸದಸ್ಯರ ಪತಿಯರು ಅನಧಿಕೃತವಾಗಿ ಗ್ರಾಮ ಪಂಚಾಯ್ತಿ ಆಡಳಿತದಲ್ಲಿ ತಲೆಹಾಕುತ್ತಿರುವುದು ಹಾಗೂ ಅಧಿಕಾರಿ, ಸಿಬ್ಬಂದಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಪ್ರಕರಣಗಳು ಆಗಿಂದಾಗ್ಯೆ ನಡೆಯುತ್ತಲೇ ಇವೆ. ಇಂತಹ ಪ್ರಕರಣಗಳ ತಡೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಬಂಡೆಕುಮಾರ್‌ ಜಿಲ್ಲಾ ಪಂಚಾಯ್ತಿ ಸಿಇಒ ಜಿ.ಪ್ರಭು ಅವರಿಗೆ ಮನವಿ ಪತ್ರ ಸಲ್ಲಿಸಿದರು. ಗ್ರಾಮ ಪಂಚಾಯ್ತಿ ಸದಸ್ಯೆಯರ ಗಂಡ, ಕುಟುಂಬಸ್ಥರು ಗ್ರಾಪಂ ಆಡಳಿತದಲ್ಲಿ ಅನಧಿಕೃತವಾಗಿ ಪ್ರವೇಶ ಮಾಡುವುದು ನಿಯಮಬಾಹಿರವಾಗುತ್ತದೆ. ಆದಾಗ್ಯೂ ಕೆಲವು ಪಂಚಾಯ್ತಿಗಳಲ್ಲಿ ಸದಸ್ಯೆಯರ ಗಂಡಂದಿರು ಪ್ರಭಾವ ಬಳಸಿ, ಅಧಿಕಾರಿ, ಸಿಬ್ಬಂದಿ ಮೇಲೆ ಒತ್ತಡ ಹಾಕಿ ಕಳಪೆ ಕಾಮಗಾರಿಗಳ ನಿರ್ವಹಣೆ ಹಾಗೂ ಕಳ್ಳ ಬಿಲ್ಲುಗಳನ್ನು ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಆಯಾಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪದೇಪದೇ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಕೋರಿದರು.ಗಂಡಂದಿರ ಒತ್ತಡ, ಪ್ರಭಾವಕ್ಕೆ ಮಣಿದು ನಿಯಮ ಉಲ್ಲಂಘನೆ ಮಾಡಿರುವ ಕೆಲವು ಪಿಡಿಒಗಳು ಇಲಾಖೆಯ ಶಿಸ್ತು ಕ್ರಮ ಅನುಭವಿಸಿದ್ದಾರೆ. ಸದಸ್ಯೆಯರ ಗಂಡದಿರ ಅನಗತ್ಯ ಪ್ರವೇಶದಿಂದ ಸದಸ್ಯೆ ಪತ್ನಿಯ ಸಾಂವಿಧಾನಿಕ ಹಕ್ಕಿಗೂ ಧಕ್ಕೆ ಮಾಡುತ್ತಾರೆ. ಇದು ಕೂಡ ತಪ್ಪು. ಇಂತಹ ಪ್ರಕರಣಗಳು ಗ್ರಾಮ ಪಂಚಾಯ್ತಿಗಳಲ್ಲಿ ಮರುಕಳಿಸಿದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಬಂಡೆಕುಮಾರ್ ಮನವಿ ಮಾಡಿದರು.ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಮರಳೂರು ಕೃಷ್ಣಮೂರ್ತಿ, ಗೋವಿಂದರಾಜು, ರಂಗಧಾಮಯ್ಯ ಮೊದಲಾದವರು ಹಾಜರಿದ್ದರು.