ಸಾರಾಂಶ
ಶಿರಸಿ: ಇಲ್ಲಿನ ಗಣೇಶನಗರದ ಮಾರುತಿಗಲ್ಲಿಯ ಜನವಸತಿ ಪ್ರದೇಶದಲ್ಲಿ ಅನಧಿಕೃತವಾಗಿ ಹಂದಿ ಸಾಕಾಣಿಕೆ ಮಾಡುತ್ತಿರುವುದರಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿರುವ ಜತೆ ಸುತ್ತಲಿನ ಪರಿಸರ ಮಲಿನಗೊಂಡು ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ ಎಂದು ಆರೋಪಿಸಿ ಸ್ಥಳೀಯರು ಈ ಪ್ರದೇಶದಲ್ಲಿ ಹಂದಿ ಸಾಕಾಣಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಮಾರುತಿಗಲ್ಲಿಯಲ್ಲಿ ಅತಿ ಹಿಂದುಳಿದ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಈ ಭಾಗದಲ್ಲಿ ವಾಸದ ಮನೆಗಳ ಪಕ್ಕದಲ್ಲಿಯೇ ಅನಧಿಕೃತವಾಗಿ ಶೆಡ್ ನಿರ್ಮಿಸಿ, ಹಂದಿ ಸಾಕಾಣಿಕೆ ಮಾಡುತ್ತಿದ್ದಾರೆ. ಶೆಡ್ ನಿಂದ ಹಂದಿಗಳನ್ನು ಹೊರಗಡೆ ಬಿಡುತ್ತಿರುವುದರಿಂದ ಸುತ್ತಲಿನ ಮನೆಯೊಳಗೆ ನುಗ್ಗಿ ಹಾನಿ ಮಾಡುತ್ತಿವೆ. ಹಂದಿಗಳ ಮಲ ತೊಳೆದ ನೀರನ್ನು ನೇರವಾಗಿ ಚರಂಡಿಗೆ ಬಿಡುತ್ತಿರುವುದರಿಂದ ಸುತ್ತಮುತ್ತಲಿನ ಪ್ರದೇಶದ ಗಬ್ಬೆದ್ದು ನಾರುತ್ತಿದೆ. ಸಾಂಕ್ರಾಮಿಕ ರೋಗಗಳ ಭಯ ಉಂಟಾಗಿದೆ. ಅನಧಿಕೃತ ಹಂದಿ ಸಾಕಾಣಿಕೆ ಶೆಡ್ ತೆರವುಗೊಳಿಸಲು ಈ ಹಿಂದೆ ಸ್ಥಳೀಯರೆಲ್ಲರೂ ಸೇರಿ ನಗರಭೆಗೆ ಮನವಿ ನೀಡಿದ್ದರು. ಪೌರಾಯುಕ್ತರು, ಹಿರಿಯ ಆರೋಗ್ಯ ನಿರೀಕ್ಷಕರು, ಪರಿಸರ ಅಭಿಯಂತರರ ತಂಡವು ಸ್ಥಳಕ್ಕೆ ಭೇಟಿ ನೀಡಿ ಹಂದಿ ಸಾಕಾಣಿಕೆದಾರನಿಗೆ ಕೂಡಲೇ ಸ್ಥಳಾಂತರಗೊಳಿಸಬೇಕು ಅಥವಾ ಸ್ಥಗಿತಗೊಳಿಸಬೇಕು ಎಂದು ಮೌಖಿಕ ಆದೇಶ ನೀಡಿ, 3 ನೋಟಿಸ್ ನೀಡಿದರೂ ಕ್ಯಾರೇ ಎನ್ನದಿರುವುದಕ್ಕೆ ಸ್ಥಳೀಯರೆಲ್ಲರೂ ಸೇರಿ ಹಂದಿ ಸಾಕಾಣಿಕೆದಾರನನ್ನು ತರಾಟೆಗೆ ತೆಗೆದುಕೊಂಡರು.ಸ್ಥಳೀಯ ಮುಖಂಡ ಶಿವಾಂದ ದೇಶಳ್ಳಿ ಮಾತನಾಡಿ, ಮಾರತಿಗಲ್ಲಿಯಲ್ಲಿ ಹಿಂದುಗಳಿದ ವರ್ಗದ ಅತಿ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಇಲ್ಲಿನ ನಿವಾಸಿಗಳು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಹಂದಿಗಳ ಉಪಟಳದಿಂದ ತೀವ್ರ ತೊಂದರೆಯಾಗುತ್ತಿದೆ. ಹಂದಿ ಸಾಕಾಣಿಕೆದಾರನಿಗೆ ಇಲ್ಲಿನ ಶೆಡ್ ಸ್ಥಳಾಂತರಿಸುವಂತೆ ಹಲವಾರು ಬಾರಿ ವಿನಂತಿಸಿದರೂ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಇಲ್ಲಿನ ಜನರು ತೊಂದರೆ ಅನುಭವಿಸುತ್ತಿರುವುದನ್ನು ತಹಸೀಲ್ದಾರ, ಸಹಾಯಕ ಆಯುಕ್ತರು ಹಾಗೂ ನಗರಸಭೆಯ ಗಮನಕ್ಕೆ ತರುತ್ತೇವೆ. ಒಂದು ವಾರದೊಳಗಡೆ ಹಂದಿ ಸಾಕಾಣಿಕೆ ಶೆಡ್ ತೆರುವುಗೊಳಿಸದಿದ್ದರೆ ಮುಂದಿನ ಹೋರಾಟಕ್ಕೆ ಸಿದ್ಧರಾಗುತ್ತೇವೆ. ಅದಕ್ಕೂ ಕ್ಯಾರೇ ಎನ್ನದಿದ್ದರೆ ಸ್ಥಳೀಯರೆಲ್ಲರೂ ಸೇರಿ ಶೆಡ್ ತೆರುವುಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ಸ್ಥಳೀಯರಾದ ಲಕ್ಕಪ್ಪ ಬೋವಿಡ್ಡರ, ತಿರುಕ್ಕಪ್ಪ ಬೋವಿವಡ್ಡರ, ಮಾರುತಿ ಬೋವಿವಡ್ಡರ, ಹನುಮಂತ ಕಟ್ಟಿಮನಿ, ಶಂಕರ, ವಸರಪ್ಪ, ಮಂಜು ದಾವಣಗೆರೆ, ಭರ್ಮಪ್ಪ ಸೇರಿದಂತೆ ನೂರಾರು ಜನರು ಇದ್ದರು.ಮಾರುತಿಗಲ್ಲಿಯ ಜನವಸತಿ ಪ್ರದೇಶದಲ್ಲಿ ಅನಧಿಕೃತವಾಗಿ ಹಂದಿ ಸಾಕಾಣಿಕೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಕೂಡಲೇ ತೆರವುಗೊಳಿಸಲು ಸೂಚನೆ ನೀಡದಿದ್ದರೆ ಮುಂದೆ ನಡೆಯುವ ಅನಾಹುತಕ್ಕೆ ನಗರಸಭೆ ನೇರ ಹೊಣೆಯಾಗಲಿದೆ ಎನ್ನುತ್ತಾರೆ ಸ್ಥಳೀಯ ಮುಖಂಡ ಶಿವಾನಂದ ದೇಶಳ್ಳಿ.