ಕಸಾಯಿಖಾನೆಯಲ್ಲಿ ಕುರಿ ಮತ್ತು ಆಡು, ಕೋಳಿ ಕತ್ತರಿಸಲು ಯಾವುದೇ ಸಮಸ್ಯೆಯಿಲ್ಲ. ಅದಕ್ಕೆ ಅಭ್ಯಂತರವೂ ಇಲ್ಲ. ಕಸಾಯಿಖಾನೆಯಲ್ಲಿ ಅಕ್ರಮ ಶೆಡ್ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸ್ಥಳ ಪರಿಶೀಲನೆ ಮಾಡಿ ವಾರದೊಳಗೆ ಅತಿಕ್ರಮಣ ಮಾಡಿರುವ ಶೆಡ್ ಹಾಗೂ ಕಾಂಪೌಂಡ್ ತೆರವುಗೊಳಿಸಲಾಗುವುದು ಎಂದು ಮೇಯರ್ ಜ್ಯೋತಿ ಪಾಟೀಲ ತಿಳಿಸಿದ್ದಾರೆ.
ಧಾರವಾಡ:
ಇಲ್ಲಿನ ಶಿವಾಜಿ ವೃತ್ತದ ಬಳಿಯ ಕಸಾಯಿಖಾನೆಯಲ್ಲಿನ ಅಕ್ರಮ ಶೆಡ್ ಹಾಗೂ ಕಾಂಪೌಂಡ್ ಪರಿಶೀಲಿಸಿ ವಾರದೊಳಗೆ ತೆರವುಗೊಳಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿರ್ಧರಿಸಿದೆ.ಇಲ್ಲಿನ ಪಾಲಿಕೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಶೂನ್ಯ ವೇಳೆಯಲ್ಲಿ ಸದಸ್ಯ ಶಂಕರ ಶೇಳಕೆ ವಿಷಯ ಪ್ರಸ್ತಾಪಿಸಿ ಕಸಾಯಿಖಾನೆಯಲ್ಲಿ ಅಕ್ರಮವಾಗಿ ಗೋವುಗಳನ್ನು ಸಂಗ್ರಹಿಸಲಾಗುತ್ತದೆ. ಅವುಗಳ ಹತ್ಯೆ ನಡೆಯುತ್ತಿದೆ. ಕಸಾಯಿಖಾನೆಗೆ ಕೊಟ್ಟಿರುವ ಜಾಗದಲ್ಲಿ ಅತಿಕ್ರಮಿಸಿಕೊಂಡು ಶೆಡ್ ನಿರ್ಮಿಸಲಾಗಿದೆ. ಬ್ರಿಟಿಷ್ ಅಧಿಕಾರಿ ಥ್ಯಾಕರೆ ಸಮಾಧಿ ಕೂಡ ಅಲ್ಲೇ ಇದೆ. ಆದಕಾರಣ ಅದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.ಇದಕ್ಕೆ ಉಳಿದ ಸದಸ್ಯರು ಧ್ವನಿಗೂಡಿಸಿದರು. ಅಲ್ಲದೇ, ಕಸಾಯಿಖಾನೆಯಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ಗೋವುಗಳನ್ನು ಕತ್ತರಿಸಬಾರದು. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಎಷ್ಟು ಸಲ ಮನವಿ ಮಾಡಿದರೂ ಕ್ರಮವಾಗುತ್ತಿಲ್ಲ ಎಂದು ದೂರಿದರು.
ಈ ನಡುವೆ ಸದಸ್ಯ ಇಕ್ಬಾಲ್ ನವಲೂರ ಮಾತನಾಡಿ, ಗೋವುಗಳನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಪಾಲಿಕೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದರು.ಕೊನೆಗೆ ಮೇಯರ್ ಜ್ಯೋತಿ ಪಾಟೀಲ, ಕಸಾಯಿಖಾನೆಯಲ್ಲಿ ಕುರಿ ಮತ್ತು ಆಡು, ಕೋಳಿ ಕತ್ತರಿಸಲು ಯಾವುದೇ ಅಭ್ಯಂತರವಿಲ್ಲ. ಹಿಂದೆ ಅಲ್ಲಿ ಸಂಗ್ರಹಿಸಿದ್ದ ಗೋವುಗಳನ್ನು ಪಾಲಿಕೆ ಅಧಿಕಾರಿಗಳು ರಕ್ಷಣೆ ಮಾಡಿರುವುದುಂಟು. ಮೊದಲು ಒಬ್ಬರು ಸೆಕ್ಯುರಿಟಿ ಗಾರ್ಡ್ ಇದ್ದರು. ಅದನ್ನೀಗ 5ಕ್ಕೇರಿಸಲಾಗಿದೆ. ಇನ್ನು 10 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಕಸಾಯಿಖಾನೆಯಲ್ಲಿ ಅಕ್ರಮ ಶೆಡ್ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸ್ಥಳ ಪರಿಶೀಲನೆ ಮಾಡಿ ವಾರದೊಳಗೆ ಅತಿಕ್ರಮಣ ಮಾಡಿರುವ ಶೆಡ್ ಹಾಗೂ ಕಾಂಪೌಂಡ್ ತೆರವುಗೊಳಿಸಲಾಗುವುದು ಎಂದು ರೂಲಿಂಗ್ ನೀಡಿದರು.