ಸಿಗದ ಮೇವು: ರೈತರಿಗೆ ತಲೆನೋವು

| Published : Mar 30 2024, 12:53 AM IST

ಸಾರಾಂಶ

ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಕೈಕೊಟ್ಟಿದ್ದರಿಂದ ರೈತರ ಬೆಳೆ ನಾಶವಾಯಿತು. ತೀವ್ರ ಬರ ಆವರಿಸಿದ್ದರಿಂದ ರೈತರು ಸಂಕಷ್ಟ ಎದುರಿಸಿದರು. ಬರಗಾಲದ ಪರಿಣಾಮದಿಂದ ಈಗ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಸಾವಳಗಿ

ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಕೈಕೊಟ್ಟಿದ್ದರಿಂದ ರೈತರ ಬೆಳೆ ನಾಶವಾಯಿತು. ತೀವ್ರ ಬರ ಆವರಿಸಿದ್ದರಿಂದ ರೈತರು ಸಂಕಷ್ಟ ಎದುರಿಸಿದರು. ಬರಗಾಲದ ಪರಿಣಾಮದಿಂದ ಈಗ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ.

ಪ್ರಸಕ್ತ ಸಾಲಿನ ಬರಗಾಲ ಅನ್ನದಾತರನ್ನು ಸಂಕಷ್ಟಕ್ಕೆ ದೂಡಿದೆ. ಮಳೆ ಇಲ್ಲದೆ ಬೆಳೆಗಳು ಸಹ ನಾಶವಾಗಿವೆ. ಇದರಿಂದ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ. ಜೋಳದಿಂದ ಬೇರ್ಪಡಿಸಿದ ಕಣಿಕೆಗೆ (ದಂಟು) ಈಗ ಬೇಡಿಕೆ ಹೆಚ್ಚಿದೆ. ಬೇಸಿಗೆಯಲ್ಲಿ ಜಾನುವಾರುಗಳ ಮೇವಿಗೆ ಜೋಳದ ಕಣಿಕೆ ಆಧಾರವಾಗಿತ್ತು. ಸುಗ್ಗಿ ಕಾಲದಲ್ಲಿ ಕಣಿಕೆ ಬಣವೆ ಹಾಕಿಟ್ಟು, ಬೇಸಿಗೆ ಕಾಲದಲ್ಲಿ ಹಸಿರು ಮೇವಿನ ಸಮಸ್ಯೆ ಉಂಟಾದಾಗ ಸಂಗ್ರಹಿಸಿದ ಒಣ ಹುಲ್ಲನ್ನು ದನಕರುಗಳಿಗೆ ಆಹಾರವಾಗಿ ನೀಡಲಾಗುತ್ತದೆ.

ಆದರೆ, ಈ ಬಾರಿ ಸರಿಯಾಗಿ ಮಳೆ ಕೂಡ ಆಗಿಲ್ಲ. ಇದರಿಂದಾಗಿ ಸಹಜವಾಗಿ ಬೆಳೆಗಳು ಕೂಡ ನಾಶವಾಗಿವೆ. ಇದು ಕೂಡ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಲು ಪ್ರಮುಖ ಕಾರಣವಾಗಿದೆ. ಇನ್ನು ಮೂರು ತಿಂಗಳು ಬೇಸಿಗೆ ಇರಲಿದೆ. ಈ ವೇಳೆ ಜಾನುವಾರುಗಳ ಗತಿ ಏನು ಎಂಬ ಚಿಂತೆ ಕೃಷಿಕರನ್ನು ಕಾಡುತ್ತಿದೆ. ಅಷ್ಟಿಷ್ಟು ಕಣಿಕೆ ಇದ್ದವರು ಮಾರಲು ಮುಂದೆ ಬರುತ್ತಿಲ್ಲ. ಕಾರಣ ಮೇವಿನ ಸಮಸ್ಯೆ ಮತ್ತಷ್ಟು ಹೆಚ್ಚಿದೆ. ಎಮ್ಮೆ, ಆಕಳು, ಎತ್ತು ಹೊಂದಿರುವ ರೈತರು ಕಣಿಕೆ ಖರೀದಿಗಾಗಿ ಎಲ್ಲೆಡೆ ಅಲೆದಾಟ ನಡೆಸಿದ್ದಾರೆ. ಸದ್ಯ ₹3800 ರಿಂದ ₹4000 ವರೆಗೆ ಜೋಳದ ಇದೆ. ಒಂದು ಸೂಡ ಕಣಿಕೆಗೆ ₹8 ರಿಂದ ₹10 ದರ ಇದ್ದು 1000 ಕಣಿಕೆ ಸೂಡಿಗೆ ₹8 ರಿಂದ ₹ 10 ಸಾವಿರದ ವರೆಗೆ ಇದೆ. ಆದರೂ ದನಕರುಗಳಿಗೆ ಮೇವು ಸಿಗುತ್ತಿಲ್ಲ.

ಬೆಳೆ ನಷ್ಟ ಹಾಗೂ ದುಬಾರಿ ಬೆಲೆಯಿಂದ ಮೇವು ಖರೀದಿಸಲು ರೈತರು ಪರದಾಡುತ್ತಿದ್ದಾರೆ. ಭೂಮಿ ಇದ್ದವರು ನಮ್ಮ ದನಕರುಗಳಿಗೆ ಮೇವು ಸಾಲುತ್ತಿಲ್ಲ ನಾವು ಮಾರಾಟ ಮಾಡುವುದಿಲ್ಲ ಹೇಳುತ್ತಿದ್ದಾರೆ. ಭೂಮಿ ಇಲ್ಲದವರು ಮೇವು ಖರೀದಿಸಲು ಆಗದೆ ಜಾನುವಾರುಗಳನ್ನು ಮಾರಾಟ ಮಾಡಲು ಆಗದೆ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಸರ್ಕಾರ ಮೇವು ಸಂಗ್ರಹ ಮಾಡಿ ಸಹಾಯಧನದ ರೂಪದಲ್ಲಿ ರೈತರಿಗೆ ನೆರವಾಗಬೇಕು. ಸರ್ಕಾರ ಅನ್ನದಾತರ ಸಮಸ್ಯೆಗಳಿಗೆ ಸ್ಪಂದಿಸಿಬೇಕು ಎಂದು ರೈತರು ಅಳಲು ತೊಡಿಕೊಂಡರು.

ಜೋಳದ ಕಣಿಕೆಯೇ ಮುಖ್ಯ ಆಹಾರ: ಜೋಳದ ಕಣಿಕೆ ಜಾನುವಾರುಗಳಿಗೆ ಮುಖ್ಯವಾದ ಆಹಾರ. ಇದರಿಂದಾಗಿ ರೈತರು ಜಾನುವಾರುಗಳಿಗೆ ವರ್ಷ ಪೂರ್ತಿ ಬೇಕಾಗುವಷ್ಟು ಅಗತ್ಯ ಪ್ರಮಾಣದಲ್ಲಿ ಮೇವುಗಳನ್ನು ಖರೀದಿಸಿ ಬಣವೆಗಳನ್ನು ಕಟ್ಟುತ್ತಾರೆ. ಕಳೆದ ವರ್ಷದ ಜೋಳದ ಕಣಿಕೆಯ ಬಣವೆಯನ್ನು ಈ ವರ್ಷ ಉಪಯೋಗಿಸಿದರೆ, ಈ ವರ್ಷದ ಕಣಿಕೆಯ ಬಣವೆಯನ್ನು ಮುಂದಿನ ವರ್ಷ ಉಪಯೋಗಿಸುತ್ತಾರೆ. ಹೀಗೆ ದನಕರುಗಳಿಗೆ ಮೇವು ಸಂಗ್ರಹಿಸಿಟ್ಟು ರೈತರು ಉಪಯೋಗಿಸುತ್ತಾರೆ.ಭೂಮಿಯನ್ನೇ ನಂಬಿ ಬದುಕುವ ರೈತರಿಗೆ ಬರಗಾಲದ ಕರಿಮೋಡ ಆವರಿಸಿದೆ. ಮಳೆ ಇಲ್ಲದೆ ಹಸಿರು ಹುಲ್ಲು ಸಿಗುತ್ತಿಲ್ಲ. ದನಕರುಗಳ ಹೊಟ್ಟೆಗೆ ಆಹಾರ ಮೇವಿಗಾಗಿ ಅಲೆದಾಟ ಹೆಚ್ಚಾಗಿದೆ. ಈ ಭಾಗದಲ್ಲಿ ಮೇವಿನ ಕೊರತೆ ಉಂಟಾಗಿದೆ. ಕೂಲಿ ಮಾಡಿ ಜೀವನ ಸಾಗಿಸುವ ರೈತರ ಬದುಕು ದುಸ್ತರವಾಗಿದೆ. ಸರ್ಕಾರ ರೈತರಿಗೆ ನೆರವಾಗಬೇಕು.

- ಮಹಾನಿಂಗ ಮಾಳಿ, ಸಾವಳಗಿ ರೈತರು.