ಸಾರಾಂಶ
ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ ೭ನೇ ವೇತನ ಆಯೋಗ ರಚಿಸಿ ೨ನೇ ಬಾರಿಗೆ ಆಯೋಗದ ಅವಧಿ ವಿಸ್ತರಿಸಲಾಗಿದೆ. ೧೩ ತಿಂಗಳ ಕಳೆದಿದ್ದು, ತನ್ನ ವರದಿಯನ್ನು ಸರ್ಕಾರಕ್ಕೆ ನೀಡಿಲ್ಲ.
ಕಾರವಾರ:
ರಾಜ್ಯ ಸರ್ಕಾರಿ ನೌಕರರ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕದಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶಾಸಕ ಸತೀಶ ಸೈಲ್ ಮೂಲಕ ಬುಧವಾರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ರಾಜ್ಯ ಸರ್ಕಾರಿ ನೌಕರರಿಗೆ ೭ನೇ ವೇತನ ಆಯೋಗದ ಸೌಲಭ್ಯ ಜಾರಿಗೆಗೊಳಿಸಲು ನ. ೨೦೨೨ರಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ ೭ನೇ ವೇತನ ಆಯೋಗ ರಚಿಸಿ ೨ನೇ ಬಾರಿಗೆ ಆಯೋಗದ ಅವಧಿ ವಿಸ್ತರಿಸಲಾಗಿದೆ. ೧೩ ತಿಂಗಳ ಕಳೆದಿದ್ದು, ತನ್ನ ವರದಿಯನ್ನು ಸರ್ಕಾರಕ್ಕೆ ನೀಡಿಲ್ಲ. ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಿದ್ದಾಗ ೬ನೇ ವೇತನ ಆಯೋಗ ರಚಿಸಿ, ೮ ತಿಂಗಳ ಒಳಗೆ ಅಲ್ಪಾವಧಿಯ ವರದಿ ಪಡೆದು ವಿಳಂಬ ಮಾಡದೇ ಸರ್ಕಾರಿ ನೌಕರರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಆದರೆ ಈಗ ೨ನೇ ಬಾರಿಗೆ ಆಯೋಗದ ಅವಧಿ ವಿಸ್ತರಣೆ ಮಾಡಿದ್ದರಿಂದ ವೇತನ ಆಯೋಗದ ಬಗ್ಗೆ ಅನಿಶ್ಚಿತತೆ ಉಂಟಾಗಿದೆ ಎಂದು ತಿಳಿಸಿದರು.
ಹಳೆ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೆ ತರುವ ಸಂಬಂಧ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು ಈ ವರೆಗೂ ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಒಪಿಎಸ್ ಜಾರಿಗೆಗೊಳಿಸದೆ ಇರುವುದು ೩ ಲಕ್ಷ ನೌಕರರಲ್ಲಿ ಆತಂಕ ಮೂಡಿಸಿದೆ. ನೌಕರರು, ಅವರ ಕುಟುಂಬದವರಿಗೆ ನಗದು ರಹಿತ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿ ಯೋಜನೆ ಕೂಡಾ ಜಾರಿಗೆ ಬಂದಿಲ್ಲ ಎಂದರು.ಜಿಲ್ಲಾಧ್ಯಕ್ಷ ಸಂಜೀವಕುಮಾರ ನಾಯ್ಕ, ಸುರೇಶ ಶೆಟ್ಟಿ, ಜೈರಂಗನಾಥ ಮೊದಲಾದವರು ಇದ್ದರು.