ಸಾರಾಂಶ
ಶೂನ್ಯಸಿಂಹಾಸನ ಮೊದಲಿಗೇರಿದವರು ಹಾನಗಲ್ಲಿನ ಕುಮಾರೇಶ್ವರರು. ಅಂತಹವರು ಏರಿದ ಸಿಂಹಾಸನ ಏರುವುದು ಸಾಮಾನ್ಯವಲ್ಲ.
ಮರಿಯಮ್ಮನಹಳ್ಳಿ: ಸ್ವಾಮಿಗಳು ಮಠದ ಪೀಠವನ್ನು ಅಲಂಕರಿಸುವುದು ಸಾಮಾನ್ಯ ವಿಷಯವಲ್ಲ. ಶೂನ್ಯ ಸಿಂಹಾಸನ ಏರಲು ಎದೆಗಾರಿಕೆ ಬೇಕು. ಎದೆಗಾರಿಕೆ ಇದ್ದವರು ಸ್ವಾಮಿ ಆಗುತ್ತಾರೆ. ಸ್ವಾಮಿಗಳಲ್ಲಿ ಶಕ್ತಿ ಇದ್ದಾಗ ಮಾತ್ರ ಪೀಠ ಅಲಂಕರಿಸಿ, ಈ ಪೀಠದಲ್ಲಿ ಕುಳಿತು ಎಲ್ಲ ಸಮಾಜಗಳನ್ನು ಉದ್ದರಿಸುತ್ತಾರೆ. ಅಂತಹ ಶಕ್ತಿಯನ್ನು ನಿರಂಜನಪ್ರಭು ಶ್ರೀ ಹೊಂದಿದ್ದಾರೆ ಎಂದು ವಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಪ್ರಣವಸ್ವರೂಪ ಸಿದ್ದಲಿಂಗ ಶ್ರೀ ಹೇಳಿದರು.
ಅವರು ಸಮೀಪದ ಗರಗ ನಾಗಲಾಪುರ ಒಪ್ಪತ್ತೇಶ್ವರಸ್ವಾಮಿ ವಿರಕ್ತಮಠದ ನಿರಂಜನಪ್ರಭು ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ನಡೆದ ಶೂನ್ಯ ಸಿಂಹಾಸನರೋಹಣದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಶೂನ್ಯಸಿಂಹಾಸನ ಮೊದಲಿಗೇರಿದವರು ಹಾನಗಲ್ಲಿನ ಕುಮಾರೇಶ್ವರರು. ಅಂತಹವರು ಏರಿದ ಸಿಂಹಾಸನ ಏರುವುದು ಸಾಮಾನ್ಯವಲ್ಲ. ನಿರಂಜನಪೀಠ ಸಾಮಾನ್ಯವಾಗಿರುವಂತದ್ದಲ್ಲ. ಈ ಸಿಂಹಾಸನ ಬೆಂಕಿಯಂಥದ್ದು. ಇದರ ಮೇಲೆ ಕುಳಿತುಕೊಳ್ಳಬೇಕು ಎಂದರೆ ಶಕ್ತಿ ಬೇಕು. ಗರಗ ನಾಗಲಾಪುರದ ಗುರು ಒಪ್ಪತ್ತೇಶ್ವರಸ್ವಾಮಿ ವಿರಕ್ತಮಠದ ಪೀಠದ ಮೇಲೆ ನಿರಂಜನಪ್ರಭು ಶ್ರೀ ಈ ಪೀಠದ ಮೇಲೆ ಕುಳಿತು ಗರಗ ನಾಗಲಾಪುರದ ಮಠವನ್ನು ಉತ್ತಮ ರೀತಿಯಲ್ಲಿ ಜೀರ್ಣೋದ್ಧಾರ ಮಾಡುತ್ತಾರೆ ಎಂದರು.ಹೊಸಪೇಟೆಯ ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಜ.ಕೊಟ್ಟೂರು ಬಸವಲಿಂಗ ಶ್ರೀ ಮಾತನಾಡಿ, ಒಪ್ಪತ್ತೇಶ್ವರ ಮಠಕ್ಕೆ ತನ್ನದೇ ಆದ ವಿಶಿಷ್ಟ ಪರಂಪರೆಯಿದೆ. ಮಠಕ್ಕೆಇಂದಿನಿಂದ ನಿರಂಜನಪ್ರಭು ಶ್ರೀ ಪೀಠಾಧಿಪತಿ. ಮೂಲ ಪರಂಪರೆ ಮುಂದುವರಿಸಬೇಕು. ಸ್ವಾಮಿಜಿಗಳಿಗೆ ಸೇವಾ ಮನೋಭಾವನೆ ಅತೀ ಮುಖ್ಯ. ಒಳ್ಳೆಯ ಕೆಲಸಕ್ಕೆ ಟೀಕೆ, ಟಿಪ್ಪಣೆಗಳಿಗೆ ಹೆದರಬಾರದು ಎಂದರು.ಪಟ್ಟಾಧಿಕಾರ ಸ್ವೀಕರಿಸಿದ ನಿರಂಜನಪ್ರಭು ಶ್ರೀ ಮಾತನಾಡಿ, ಒಡೆದು ಹೋದ ಭಕ್ತರ ಮನಸು ಕಟ್ಟುವ ಕೆಲಸವಾಗಬೇಕು. ನಿಸ್ವಾರ್ಥ ಸಮಾಜಸೇವೆ ಮಾಡಬೇಕು ಎನ್ನುವ ಮನೋಭಾವನೆ ಹೊಂದಿದ್ದೇನೆ. ಒಪ್ಪತ್ತೇಶ್ವರಸ್ವಾಮಿ ಮಠದ ಭಕ್ತರನ್ನು ನೋಡಿ ಬಂದಿದ್ದೇನೆ. ಮಠದ ಆಸ್ತಿ ನೋಡಿ ಬಂದಿಲ್ಲ. ನಿಮ್ಮೆಲ್ಲರ ಸ್ವಾಮಿಯಾಗಿ ಸೇವೆ ಮಾಡುವೆ ಎಂದು ಅವರು ಹೇಳಿದರು.ಶ್ರೀಮಠಕ್ಕೆ ಬರುವಾಗ ಪ್ರತಿಯೊಬ್ಬರು ಪಾದರಕ್ಷೆ ಹೇಗೆ ಹೊರಗಡೆ ಬಿಡುವರೋ, ಹಾಗೆಯೇ ಜಾತಿ, ಮತ, ರಾಜಕೀಯ, ಧರ್ಮಗಳನ್ನು ಸಹ ಮಠದ ಹೊರಗೆ ಬಿಟ್ಟುಬರಬೇಕು ಎಂದರು.ಶಾಸಕ ನೇಮಿರಾಜ್ ನಾಯ್ಕ್ ಮಾತನಾಡಿ, ಧರ್ಮ, ಧಾರ್ಮಿಕತೆ ಹೆಚ್ಚಾಗಬೇಕು. ಇಂದು ನಗರೀಕರಣದ ಪ್ರಭಾವದಿಂದ ನಮ್ಮ ಆಚರಣೆಗಳು ಮಂಕಾಗುತ್ತಿವೆ ಎಂದರು.ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀ ಸಭೆಯಲ್ಲಿ ಮಾತನಾಡಿದರು.ಸಂತೆಕೆಲ್ಲೂರು ಘನಮಠೇಶ್ವರಮಠದ ಗುರುಬಸವ ಶ್ರೀ, ಸಂಡೂರಿನ ವಿರಕ್ತಮಠದ ಪ್ರಭು ಶ್ರೀ, ಕರೆಗುಡ್ಡದ ಮಹಾಂತೇಶ್ವರ ವಿರಕ್ತಮಠದ ಮಹಾಂತಲಿಂಗ ಶಿವಾಚಾರ್ಯ, ವಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಬಸವಲಿಂಗ ಶ್ರೀ, ಯಶವಂತನಗದ ಸಿದ್ದರಾಮೇಶ್ವರ ವಿರಕ್ತಮಠದ ಗಂಗಾಧರ ಶ್ರೀ, ಗುಳೇದಗುಡ್ಡದ ಮರಡಿಮಠದ ಕಾಡಸಿದ್ದೇಶ್ವರ ಶಿವಾಚಾರ್ಯ ಶ್ರೀ, ಅಡವಿಅಮರೇಶ್ವರ ಸುಕ್ಷೇತ್ರದ ತೊಂಟದಾರ್ಯ ಶ್ರೀ, ಅರಳಿಹಳ್ಳಿ ಗುರುಪಾದೇವರಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ, ಸಿರುಗಪ್ಪದ ಬಸವಭೂಷಣ ಶ್ರೀ, ಹೊಸಪೇಟೆಯ ಕೆಂಪಿನಮಠದ ಚಂದ್ರಶೇಖರದೇವರು, ಲಿಂಗಾನಾಯಕನಹಳ್ಳಿಯ ನಿರಂಜನ ದೇವರು, ಹನಸಿಯ ಶಂಕರ ಶ್ರೀ, ಸೋಮಸಮುದ್ರದ ಸಿದ್ದಲಿಂಗದೇಶಿಕರು, ಸ್ಥಳೀಯ ಮುಖಂಡರಾದ ಸಾಲಿಸಿದ್ದಯ್ಯಸ್ವಾಮಿ, ಕುರಿ ಶಿವಮೂರ್ತಿ, ಸಿ.ಎ. ಗಾಳೆಪ್ಪ ಇದ್ದರು.ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಪ್ರಣವಸ್ವರೂಪ ಸಿದ್ದಲಿಂಗ ಶ್ರೀ ಒಪ್ಪತ್ತೇಶ್ವರಸ್ವಾಮಿ ವಿರಕ್ತಮಠದ ನಿರಂಜನಪ್ರಭು ದೇಶಿಕರಿಗೆ ನಿರಂಜನ ದೀಕ್ಷೆ ಅನುಗ್ರಹಿಸಿ ನಿರಂಜನ ಪ್ರಣವಸ್ವರೂಪ ನಿರಂಜನಪ್ರಭು ಶ್ರೀ ಎಂಬ ನೂತನ ಅಭಿದಾನ ದಯಾಪಾಲಿಸಿದರು.ನಿರಂಜನಪ್ರಭು ಶ್ರೀಗಳ ತಂದೆ ವೇದಮೂರ್ತಿಶಾಸ್ತ್ರಿ ಶೀಲವಂತಮಠ ಮತ್ತು ತಾಯಿ ಗಿರಿಜಾದೇವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.