ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ವಿಶ್ವ ಹೃದಯ ದಿನದ ಅಂಗವಾಗಿ ನಗರದ ಡೇರಿ ವೃತ್ತದಲ್ಲಿ ಭಾನುವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ಜಾಥಾ ಮತ್ತು ಮ್ಯಾರಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಇಂಡಿಯಾನಾ ಆಸ್ಪತ್ರೆಯ ಮೆಡಿಕಲ್ ನಿರ್ದೇಶಕ ಹಾಗೂ ಹೃದ್ರೋಗ ತಜ್ಞ ಡಾ. ಎಂ. ಅನೂಪ್ ಮಾತನಾಡಿ, ಅನಿಯಂತ್ರಿತ ಜೀವನ ಶೈಲಿ, ವ್ಯಾಯಾಮದ ಕೊರತೆ, ಅತಿಯಾದ ಒತ್ತಡ, ಧೂಮಪಾನ, ಮದ್ಯಪಾನ ಮತ್ತು ಅಸಮರ್ಪಕ ಆಹಾರ ಪದ್ಧತಿ ಇವುಗಳೆಲ್ಲ ಹೃದಯ ರೋಗದ ಪ್ರಮುಖ ಕಾರಣಗಳು. ಇಂತಹ ಸಂದರ್ಭದಲ್ಲಿ ಜನರಿಗೆ, ವಿಶೇಷವಾಗಿ ಯುವ ಪೀಳಿಗೆಗೆ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ, ಹೃದಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹೃದಯದ ನಾಡಿಯನ್ನು ನೀವು ಅರಿತುಕೊಳ್ಳಿ, ಈ ಘೋಷವಾಕ್ಯದೊಂದಿಗೆ ಹೃದಯ ಆರೋಗ್ಯದ ಮಹತ್ವವನ್ನು ಸಾರುವ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರದ ಡೇರಿ ವೃತ್ತದಿಂದ ರಿಂಗ್ ರೋಡ್ ಸಾಲಗಾಮೆ ವೃತ್ತದವರೆಗೆ ಮ್ಯಾರಥಾನ್ ಮತ್ತು ವಾಕಥಾನ್ ಹಮ್ಮಿಕೊಳ್ಳಲಾಗಿತ್ತು. ಶಕ್ತಿಯುತವಾಗಿ ಓಡಬಲ್ಲವರಿಗಾಗಿ ಮ್ಯಾರಥಾನ್ ಇರಲಿದ್ದು, ನಡೆದು ಪಾಲ್ಗೊಳ್ಳ ಬಯಸುವವರಿಗೆ ವಾಕಥಾನ್ ವ್ಯವಸ್ಥೆ ಮಾಡಲಾಗಿದೆ.ಮ್ಯಾರಥಾನ್ ಬಹುಮಾನಗಳು:
ಪ್ರಥಮ ಬಹುಮಾನ - ೧೦,೦೦೦, ದ್ವಿತೀಯ ಬಹುಮಾನ- ೫,೦೦೦, ತೃತೀಯ ಬಹುಮಾನ- ೩,೦೦೦ ಗಳನ್ನು ನೀಡಲಾಗುವುದು. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರೋತ್ಸಾಹ ಪತ್ರ ನೀಡಲಾಗುವುದು. ವಿವಿಧ ವಯೋಮಾನದ ಸ್ಪರ್ಧಿಗಳನ್ನು ಗಮನದಲ್ಲಿಟ್ಟುಕೊಂಡು ಬೇರೆ ಬೇರೆ ವಿಭಾಗಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.ಟೈಮ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಿ.ಕೆ. ಗಂಗಾಧರ್, ಟೈಮ್ಸ್ ಗುರುಕುಲ ಕಾರ್ಯದರ್ಶಿ ಸುರೇಂದ್ರ, ರೋಟರಿ ಸುಧಾಕರ್, ಸಮೃದ್ಧಿ ಬ್ಯಾಂಕಿನ ಪಾರ್ಶ್ವನಾಥ್, ಕರಾವಳಿ ಸುರೇಂದ್ರ, ಐಎಂಎ ಅಧ್ಯಕ್ಷ ಡಾ. ಡಾಂಗೆ, ಶ್ರೀರಂಗ, ವಿವೇಕ್, ಇಂಡಿಯಾನ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಎಸ್.ಬಿ. ನಿರೂಪ್, ಆಸ್ಪತ್ರೆಯ ಆಡಳಿತಾಧಿಕಾರಿ ಪ್ರದೀಪ್ ಹಾಗೂ ಇತರರು ಉಪಸ್ಥಿತರಿದ್ದರು.