ಕಳಪೆ ಕಾಮಗಾರಿ: ನಿರ್ಮಾಣ ಹಂತದ ಶಾಲಾ ಕಟ್ಟಡ ನೆಲಸಮ

| Published : Oct 14 2025, 01:00 AM IST

ಸಾರಾಂಶ

ನಿರ್ಮಾಣ ಹಂತದಲ್ಲಿದ್ದ ಶಾಲಾ ಕಟ್ಟಡವನ್ನು ಜಿಪಂ ಅಧಿಕಾರಿಗಳೇ ಮುಂದೆ ನಿಂತು ನೆಲಸಮ ಮಾಡಿದ ಘಟನೆ ತಾಲೂಕಿನ ಲಕ್ಕೇನಹಳ್ಳಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ನಿರ್ಮಾಣ ಹಂತದಲ್ಲಿದ್ದ ಶಾಲಾ ಕಟ್ಟಡವನ್ನು ಜಿಪಂ ಅಧಿಕಾರಿಗಳೇ ಮುಂದೆ ನಿಂತು ನೆಲಸಮ ಮಾಡಿದ ಘಟನೆ ತಾಲೂಕಿನ ಲಕ್ಕೇನಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ಶಾಲೆಗೆ ವಿವೇಕ ಯೋಜನೆಯಡಿ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ ಗುತ್ತಿಗೆ ನಿರ್ವಹಿಸಿದ್ದ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ್ದರು. ಈ ಕುರಿತು ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ತಮ್ಮ ತಂಡದೊಂದಿಗೆ ಭೇಟಿ ನೀಡಿ ತಳಪಾಯವಿಲ್ಲದೇ, ಕಬ್ಬಿಣ ಹಾಗೂ ಸಿಮೆಂಟ್ ಗಳನ್ನು ನಿಯಮದಂತೆ ಬಳಸದೆ, ಕಳಪೆ ಮಟ್ಟದ ಇಟ್ಟಿಗೆ ಬಳಸಿ ಕಟ್ಟಡ ನಿರ್ಮಿಸುತ್ತಿರುವುದನ್ನು ಬೆಳಕಿಗೆ ತಂದಿದ್ದರು. ಜೊತೆಗೆ ಈ ಬಗ್ಗೆ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲಿ ಸ್ಥಳ ಪರಿಶೀಲನೆ ಮಾಡದ ಬಗ್ಗೆ ಆಕ್ಷೇಪಿಸಿ, ಮಕ್ಕಳ ಆಯೋಗಕ್ಕೂ ದೂರು ನೀಡಿದ್ದರು.

ಈ ಸಂಬಂಧ ಮಕ್ಕಳ ಆಯೋಗದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಕಟ್ಟಡ ಅತ್ಯಂತ ಕಳಪೆಯಾಗಿರುವುದನ್ನು ಮನಗಂಡು ಗುಣಮಟ್ಟದ ಕಟ್ಟಡ ಕಟ್ಟಿಕೊಡಲು ಆದೇಶಿಸಿದ್ದರು. ಆದರೆ ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ಗುತ್ತಿಗೆದಾರ ಹಾಗೂ ಸರಕಾರಿ ವ್ಯವಸ್ಥೆ ಮತ್ತೆ ಅದೆ ಕಳಪೆ ಮಟ್ಟದಲ್ಲಿ ಕಾಮಗಾರಿ ಮುಂದುವರೆಸಿದ ಕಾರಣ ಮತ್ತೆ ದೂರು ಸಲ್ಲಿಸಿ, ಅಡಿಪಾಯವಿಲ್ಲದ ಹಾಗೂ ಅಭದ್ರ ಪಿಲ್ಲರ್ ಗಳಿಂದ ನಿರ್ಮಾಣವಾದ ಕಟ್ಟಡ ಕುಸಿದು ಬಿದ್ದು ಜೀವಹಾನಿಯಾಗಿ ಅನಾಹುತವಾದರೆ ಇದಕ್ಕೆ ಸದರಿ ವ್ಯವಸ್ಥೆಯೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಪರಿಣಾಮ ಸಂಬಂಧಿಸಿದ ಅಧಿಕಾರಿಗಳೇ ಅರೆಬರೆ ಕಾಮಗಾರಿಯಾಗಿದ್ದ ಶಾಲಾ ಕಟ್ಟಡವನ್ನು ಜೆಸಿಬಿ ಮೂಲಕ ನಾಶಪಡಿಸಿದ್ದಾರೆ.