ಪ್ರಜಾತಂತ್ರ ಅರ್ಥವಾಗಲು ಸಂವಿಧಾನ ಅರಿತುಕೊಳ್ಳಿ

| Published : May 19 2024, 01:50 AM IST / Updated: May 19 2024, 01:51 AM IST

ಸಾರಾಂಶ

ಸಮಾಜ ಸೇವೆಯಲ್ಲಿ ಅನೇಕ ಸಂಕಷ್ಟಗಳು ಸಾವು ನೋವುಗಳು ಕಂಡರೂ ಸಾಮಾಜಿಕ ಚಳವಳಿಗೆ ಎಂದು ಹಿಂದಕ್ಕೆ ಹೋಗಿಲ್ಲ. ಹಾಗಾಗಿ ಯಾರೂ ಅತೃಪ್ತರಾಗದೆ ಸಾಮಾಜಿಕ ಚಳವಳಿಗಳನ್ನು ಮುನ್ನಡೆಸಿಕೊಂಡು ಹೋಗುವಂತಾಗಬೇಕು.

ಕನ್ನಡಪ್ರಭ ವಾರ್ತೆ ಕೋಲಾರಭಾರತದ ಓದು ಮತ್ತು ಸಂವಿಧಾನ ಓದು ಎರಡೂ ಸಹ ಒಂದೇ ನಾಣ್ಯದ ಎರಡು ಮುಖಗಳಾಗಿದೆ, ಅಂಬೇಡ್ಕರ್ ಆಶಯಗಳು ಸಂವಿಧಾನದಲ್ಲಿದೆ, ಅಂಬೇಡ್ಕರ್‌ರನ್ನು ಅರಿಯದೆ ಸಂವಿಧಾನ ಅರಿಯಲು ಸಾಧ್ಯವಿಲ್ಲ, ಅಂಬೇಡ್ಕರ್‌ರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರ ಅರ್ಥಪೂರ್ಣ ಜೀವನ ನಡೆಸಲು ಸಾಧ್ಯ ಎಂದು ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅಭಿಪ್ರಾಯಪಟ್ಟರು.ನಗರದ ನಚಿಕೇತನ ನಿಲಯದ ಭೌದ್ದ ವಿಹಾರ ತಾಣದಲ್ಲಿ ಸಂವಿಧಾನ ಓದು-೨ ಭಾಗದ ಅಂಬೇಡ್ಕರ್ ಕಂಡ ಕನಸುಗಳು ಮತ್ತು ಸಂವಿಧಾನ ವಿಷಯಕ್ಕೆ ಸಂಬಂಧಿಸಿದಂತೆ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮಾಂತರ ಜನಪದರದಲ್ಲಿನ ನ್ಯಾಯಕಟ್ಟೆಗಳಲ್ಲಿ ಯಾವುದೇ ಶಿಕ್ಷಣದ ಅರಿವು ಇಲ್ಲದಿದ್ದರೂ ಅವರುಗಳು ನೀಡುತ್ತಿದ್ದ ತೀರ್ಪಿನಲ್ಲಿ ಜ್ಞಾನದ ಶ್ರೀಮಂತ ನೋಟವನ್ನು ಕಾಣಬಹುದಾಗಿತ್ತು, ಹಿಂದಿನ ಕಾಲದಲ್ಲಿ ಅಜ್ಜಿಯರು ನ್ಯಾಯದ ಕಥೆಗಳಲ್ಲಿ ಜ್ಞಾನದ ವಿಕಾಸ ಅರಿಯಬಹುದಾಗಿದೆ ಎಂದರು.

ಸಾಮಾಜಿಕ ಚಳವಳಿ ಮುನ್ನಡೆಸಿ

ರಾಮಕೃಷ್ಣ, ಬುದ್ಧ, ಬಸವ, ಅಂಬೇಡ್ಕರ್ ಇವರ ಮೇಲೂ ಅಪವಾದ ತಪ್ಪಿಲ್ಲ. ಆದರೂ ನಾವು ಅವರನ್ನು ಆರಾಧಿಸುತ್ತೇವೆ, ಪೂಜಿಸುತ್ತೇವೆ, ಆರೋಪಗಳು ಸಾಬೀತಾದರೆ ಮಾತ್ರ ಅಪರಾಧಿಯಾಗುತ್ತಾರೆ, ಸಮಾಜ ಸೇವೆಯಲ್ಲಿ ಅನೇಕ ಸಂಕಷ್ಟಗಳು ಸಾವು ನೋವುಗಳು ಕಂಡರೂ ಸಾಮಾಜಿಕ ಚಳವಳಿಗೆ ಎಂದು ಹಿಂದಕ್ಕೆ ಹೋಗಿಲ್ಲ. ಹಾಗಾಗಿ ಯಾರೂ ಅತೃಪ್ತರಾಗದೆ ಸಾಮಾಜಿಕ ಚಳವಳಿಗಳನ್ನು ಮುನ್ನಡೆಸಿಕೊಂಡು ಹೋಗುವಂತಾಗಬೇಕು. ಇದಕ್ಕೆ ಯುವ ಜನತೆ ಸಹಕಾರ ಅಗತ್ಯವಾಗಿದೆ ಎಂದರು. ಸಂವಿಧಾನದ ತತ್ವಗಳು ಸಮಾಜದಲ್ಲಿ ಹಂತ ಹಂತವಾಗಿ ಅಳವಡಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಶೇ.೧೬ರಷ್ಟು ಇದ್ದ ಶಿಕ್ಷಣ ಇಂದು ಶೇ.೮೦ಕ್ಕೆ ಏರಿಕೆಯಾಗಿದೆ, ನಾವು ಶಿಕ್ಷಣವಂತರಾದರೂ ಕಾನೂನು ಅಕ್ಷರಸ್ಥರಾಗಬೇಕು, ಕಾನೂನು ಅರಿತು, ಸಂವಿಧಾನದ ಅಕ್ಷರಸ್ಥರಾಗಬೇಕು ಎಂದು ಕರೆ ನೀಡಿದರು.ಪ್ರಜಾತಂತ್ರ ಅರಿಯಲು ಸಂವಿಧಾನ ಓದಿ

ಸಂವಿಧಾನ ಎಂಬುದು ಕಥೆ, ಕಾದಂಬರಿಯಲ್ಲ. ಭಾರತವನ್ನು ಅರ್ಥ ಮಾಡಿಕೊಳ್ಳದೆ ಸಂವಿಧಾನ ಅರಿಯಲು ಸಾಧ್ಯವಾಗದು, ದೇಶದ ಸಂಸ್ಕೃತಿ, ಸಾಂಸ್ಕಾರಗಳು, ಆಚಾರ, ವಿಚಾರಗಳು, ಭಾಷೆ, ಆರ್ಥಿಕ ಮೌಲ್ಯಗಳು ರಾಜಕೀಯ, ಧರ್ಮ, ಜಾತಿ, ಜಾತ್ಯತೀತತೆಗಳ ಅರಿವು ನಂತರದಲ್ಲಿ ಸಂವಿಧಾನದ ಅರಿಯಲು ಸಾಧ್ಯ, ಇತಿಹಾಸ ಓದದೆ ಸಂವಿಧಾನ ಅರಿಯಲು ಸಾಧ್ಯವಿಲ್ಲ, ಸಂವಿಧಾನ ಅರಿಯದೆ ಪ್ರಜಾಪ್ರಭುತ್ವ ಅರಿವಾಗದು ಎಂದು ಪ್ರತಿಪಾದಿಸಿದರು.ಕಾಲ ಮುಂದುವರೆದಂತೆ ಆಚಾರ ವಿಚಾರಗಳು ಸಮಾಜಕ್ಕೆ ತಕ್ಕಂತೆ ಬದಲಾವಣೆಗಳಾದವು, ಸಂವಿಧಾನವನ್ನು ಆಭ್ಯಾಸ ಮಾಡಿದಾಗ ಅಂಬೇಡ್ಕರ್ ಕನಸು ನನಸು ಮಾಡಲು ಪೂರಕವಾಗಲಿದೆ. ಸಂವಿಧಾನ ಜಾರಿಯಾದ ನಂತರದಲ್ಲಿ ಸಮಾನತೆ, ಅಧಿಕಾರ, ಶಿಕ್ಷಣ, ಇತ್ಯಾದಿಗಳು ದೊರೆತು ಭಾರತವು ಇಂದು ಮುಂದುವರಿದ ೧೦ ದೇಶಗಳ ಪೈಕಿ ಒಂದಾಗಿದೆ. ಬಡತನ ಶೇ.೨೦ಕ್ಕೆ ಇಳಿದಿದೆ. ಮೂಲ ಸೌಲಭ್ಯಗಳು ಸಿಕ್ಕಿವೆ, ಭಾರತೀಯ ಎಲ್ಲಾ ಧರ್ಮಗಳ ಗ್ರಂಥಗಳಿಗಿಂತ ಸಂವಿಧಾನ ಗ್ರಂಥವೇ ಶ್ರೇಷ್ಠ ಎಂದರು.

ಎಲ್ಲ ಧರ್ಮಗಳಿಗೂ ಕಾನೂನು ಅನಿವಾರ್ಯ

ಭಯೋತ್ಪಾದನೆ, ಮೂಲ ಸಮಸ್ಯೆಗಳು, ಆರ್ಥಿಕವಾಗಿ ಸಾಂಸ್ಕೃತಿಕವಾಗಿ ದಿವಾಳಿತದ ಸವಾಲುತನವನ್ನು ಎದುರಿಸಲು ಮಾನವೀಯ ಮೌಲ್ಯಗಳನ್ನು ಸಹಾನೂಭೂತಿ ಮುಂತಾದ ಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಸಂವಿಧಾನ ರಕ್ಷಿಸಿಕೊಳ್ಳಲು ಸಾಧ್ಯ, ಚರ್ಚೆಗಳು, ಸಂವಿಧಾನದ ಮೂಲಕ ಎಲ್ಲ ಸಂಶಯಗಳನ್ನು ಬಗೆಹರಿಸಿಕೊಳ್ಳಲು ಇಂತಹ ಚರ್ಚೆಯ ಕಟ್ಟೆಗಳು ಅಗತ್ಯ. ಚರ್ಚೆಗಳು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಅಗಬೇಕು. ಯಾವುದೇ ಸರ್ಕಾರಗಳು ಯಾವುದೇ ಧರ್ಮದ ಅಡಿಯಾಳು ಅಲ್ಲ. ಎಲ್ಲಾ ಜಾತಿ, ಧರ್ಮಗಳಿಗೂ ಸಂವಿಧಾನ ಬದ್ದವಾದ ಕಾನೂನುಗಳು ಅನಿವಾರ್ಯ ಎಂದು ವಿವರಿಸಿದರು. ಸಾಮಾಜಿಕ ನ್ಯಾಯ ಎಂದರೆ ಮೀಸಲಾತಿಯೊಂದೇ ಅಲ್ಲ. ಎಲ್ಲರಿಗೂ ಸಮಾನತೆ ಧಕ್ಕುವಂತ ಅವಕಾಶಗಳಾಗಿದೆ. ಸಂವಿಧಾನಕ್ಕೆ ಅಂಬೇಡ್ಕರ್ ಆಶಯದ ಕನಸುಗಳಿಗೆ ಒತ್ತು ನೀಡುವಂತಾಗಬೇಕು, ಸೈದ್ಧಾಂತಿಕವಾದ ಸಂಘರ್ಷಗಳಾಗಬೇಕು, ಚರ್ಚೆಯ ವಿಷಯಗಳಾಗಬೇಕು. ಇವುಗಳನ್ನು ಉಳಿಸಿ ಬೆಳೆಸುವಂತಾಗಬೇಕೆಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಆಶಯ ನುಡಿಗಳಾಡಿದರು,

೧೮ಕೆಎಲ್‌ಆರ್-೬.....ಕೋಲಾರದ ನಚಿಕೇತನ ನಿಲಯದ ಭೌದ್ದ ವಿಹಾರ ತಾಣದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾ. ನಾಗಮೋಹನ್‌ದಾಸ್ ಮಾತನಾಡಿದರು.