ಇಲ್ಲಿನ ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ ಮಂಗಳೂರಿನ ಮೈಕಲ್ ಡಿಸೋಜಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಮಾರು 7 ಲಕ್ಷ ರು. ವೆಚ್ಚದಲ್ಲಿ ನೀರಿನಡಿ ಮುಳುಗಿ ಜೀವರಕ್ಷಣೆ ಮಾಡುವಾಗ ಉಪಯೋಗಿಸುವ ಸಂವಹನ ಸಾಧನವನ್ನು ಧರ್ಮಗುರು ವಂ. ಡೆನಿಸ್ ಡೆಸಾ ಹಸ್ತಾಂತರಿಸಿದರು.

ಮಲ್ಪೆ: ಇಲ್ಲಿನ ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ ಮಂಗಳೂರಿನ ಮೈಕಲ್ ಡಿಸೋಜಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಮಾರು 7 ಲಕ್ಷ ರು. ವೆಚ್ಚದಲ್ಲಿ ನೀರಿನಡಿ ಮುಳುಗಿ ಜೀವರಕ್ಷಣೆ ಮಾಡುವಾಗ ಉಪಯೋಗಿಸುವ ಸಂವಹನ ಸಾಧನವನ್ನು ಧರ್ಮಗುರು ವಂ. ಡೆನಿಸ್ ಡೆಸಾ ಹಸ್ತಾಂತರಿಸಿದರು.ನಂತರ ಮಾತನಾಡಿದ ಅವರು, ಈಶ್ವರ್ ಮಲ್ಪೆ ಅವರು ರಾಜ್ಯದ ವಿವಿಧ ಭಾಗಗಳಲ್ಲಿ ನೀರಿನಲ್ಲಿ ಮುಳುಗಿದವರ ರಕ್ಷಣೆ ಕಾರ್ಯದ ಮೂಲಕ ಸಮಾಜದ ನೋವಿನಲ್ಲಿರುವವರ ಕಣ್ಣೀರು ಒರೆಸುವ ಕೆಲಸ ಮಾಡಿಕೊಂಡು ಬಂದಿರುತ್ತಾರೆ. ಇಂತಹ ಕಾರ್ಯಕ್ಕೆ ಸೂಕ್ತ ಆಧುನಿಕ ಸಾಧನಗಳಿಲ್ಲದೆ ಕೆಲವೊಮ್ಮೆ ಅವರ ವೈಯುಕ್ತಿಕ ಜೀವಕ್ಕೂ ಅಪಾಯ ಉಂಟಾಗಿದ್ದು ಅವರ ಸೇವೆಯನ್ನು ಗಮನಿಸಿದ ಮೈಕಲ್ ಡಿಸೋಜಾ ಅವರು ನೀರಿನಡಿಯಲ್ಲಿ ಇದ್ದಾಗ ಮೇಲೆ ಇರುವವರ ಜೊತೆಗೆ ಸಂವಹನ ಸಾಧಿಸುವ ಸಾಧನವನ್ನು ನೀಡಿದ್ದಾರೆ. ಈ ಮೂಲಕ ಅವರು ಇನ್ನಷ್ಟು ಜೀವಗಳನ್ನು ರಕ್ಷಿಸುವಂತಾಗಲಿ. ಅವರು ವಾಸಿಸುವ ಮನೆ ಹಳೆಯದಾಗಿದ್ದು ಹೊಸ ಮನೆ ನಿರ್ಮಾಣಕ್ಕೂ ಕೂಡ ಮೈಕಲ್ ಡಿಸೋಜಾ ಅವರು ಮುಂದಿನ ದಿನಗಳಲ್ಲಿ ಸಹಾಯ ಹಸ್ತವನ್ನು ನೀಡಲಿದ್ದಾರೆ ಎಂದು ಭರವಸೆ ನೀಡಿದರು.

ಈಶ್ವರ್ ಮಲ್ಪೆ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದರು. ಮೈಕಲ್ ಡಿಸೋಜಾ ಚಾರಿಟೇಬಲ್ ಟ್ರಸ್ಟಿನ ಸದಸ್ಯರಾದ ಒಸ್ವಲ್ಡ್ ರೊಡ್ರಿಗಸ್ ಮತ್ತು ಸ್ವೀವನ್ ಪಿಂಟೊ ಉಜ್ವಾಡ್ ಪತ್ರಿಕೆಯ ಸಂಪಾದಕ ವಂ. ಆಲ್ವಿನ್ ಸಿಕ್ವೇರಾ, ಸ್ಥಳೀಯ ಕಾನ್ವೆಂಟಿನ ಸುಪಿರೀಯರ್ ಸಿಸ್ಟರ್ ಸುಶ್ಮಾ, ಚಾರಿಟೇಬಲ್ ಟ್ರಸ್ಟಿನ ಸದಸ್ಯ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಲವೀನಾ ಫರ್ನಾಂಡಿಸ್, 20 ಆಯೋಗಗಳ ಸಂಚಾಲಕಿ ಶಾಂತಿ ಫರ್ನಾಂಡಿಸ್, ಚರ್ಚಿನ ಸ್ತ್ರೀ ಸಂಘಟನೆ ಅಧ್ಯಕ್ಷೆ ಪ್ರೀಯಾ ರೊಡ್ರಿಗಸ್, ಈಶ್ವರ್ ಮಲ್ಪೆ ತಂಡದ ಸದಸ್ಯರು ಉಪಸ್ಥಿತರಿದ್ದರು.