ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು ಶೈಕ್ಷಣಿಕ ಕ್ಷೇತ್ರದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸದಾ ಮುಂದೆ ಇದೆ. ಈ ಕಾರಣಕ್ಕಾಗಿಯೇ ಬೆಂಗಳೂರು ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳ ವಿದ್ಯಾರ್ಥಿಗಳು ಕರಾವಳಿ ಜಿಲ್ಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಕ್ಷಣ ಪಡೆಯುವುದು ಇತ್ತೀಚಿನ ದಶಕಗಳಲ್ಲಿ ಸಾಮಾನ್ಯವಾಗಿದೆ. ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಮೊದಲ ಎರಡು ಸ್ಥಾನಗಳನ್ನು ತಾವೇ ಅಲಂಕರಿಸುತ್ತಿವೆ. ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಅಲಂಕರಿಸಿತ್ತು. ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ ಪಡೆದುಕೊಂಡಿವೆ.ಈ ಬಾರಿಯ ಎಸ್‌ಎಸ್‌ಎಲ್‌ಸಿ-1ರ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದೆ. ನೆರೆಯ ಉಡುಪಿ ಜಿಲ್ಲೆ ಶೇ. 89.96 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಕರಾವಳಿಯ ಇನ್ನೊಂದು ಜಿಲ್ಲೆ ಉತ್ತರ ಕನ್ನಡ ಶೇ. 83.19 ಅಂಕ ಗಳಿಸಿದೆ.ಕಳೆದ ಸಾಲಿನಲ್ಲಿ ನೆರೆಯ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ಎರಡನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ಮೊದಲ ಸ್ಥಾನಕ್ಕೆ ಜಿಗಿದಿದೆ...........
ದ.ಕ. ಪ್ರಥಮಕ್ಕೆ ಉಸ್ತುವಾರಿ ಸಚಿವರ ಅಭಿನಂದನೆ2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದನೆಗಳು. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು ಈ ಸಾಧನೆಗೆ ಕಾರಣರಾದ ಎಲ್ಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಶೈಕ್ಷಣಿಕ ಜೀವನದ ಬಹುಮುಖ್ಯ ಹಂತವಾಗಿರುವ ಎಸ್‌ಎಸ್‌ಎಲ್‌ಸಿ, ನಿಮ್ಮ ಮುಂದಿನ ಭವಿಷ್ಯವನ್ನು ನಿರ್ಧರಿಸಲಿದೆ. 625 ಅಂಕಗಳಿಗೆ 625 ಅಂಕ ಪಡೆದ 22 ವಿದ್ಯಾರ್ಥಿಗಳಿಗೂ ನನ್ನ ಶುಭ ಹಾರೈಕೆಗಳು. ಅನುತ್ತೀರ್ಣರಾದ ವಿದ್ಯಾರ್ಥಿಗಳು ಹತಾಶರಾಗದೆ ಮುಂದಿನ ಪರೀಕ್ಷೆಗೆ ತಯಾರಾಗಿ, ಯಶಸ್ಸು ನಿಮ್ಮದಾಗಲಿ. ಎಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಉಜ್ವಲವಾಗಿರಲಿ ಎಂದು ಸಚಿವರು ಶುಭ ಹಾರೈಸಿದ್ದಾರೆ.ಎಲ್ಲರ ಶ್ರಮದಿಂದ ರಾಜ್ಯಕ್ಕೆ ಪ್ರಥಮ: ಡಿಡಿಪಿಐ
ದಕ್ಷಿಣ ಕನ್ನಡ ಜಿಲ್ಲೆಯ ಗತ ವೈಭವ ಮರಳಿ ಬಂದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನಿಯಾಗಿದ್ದೇವೆ. ಅತ್ಯುತ್ತಮವಾದ ಫಲಿತಾಂಶ ದೊರೆತಿದೆ. ನಮ್ಮ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಾಕಷ್ಟು ಶ್ರಮವಹಿಸಿ ಇದನ್ನು ಸಂಪಾದಿಸಿದ್ದಾರೆ. ಶಾಲೆಗಳ ಆಡಳಿತ ಮಂಡಳಿಗಳು, ಪೋಷಕರು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ನಮ್ಮ ಈ ಸಾಧನೆ ಬೆಂಬಲಿಸಿದರು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಎಲ್ಲ ಸ್ತರದ ಅಧಿಕಾರಿಗಳ ಬೆಂಬಲದಿಂದ ಇದು ಸಾಧ್ಯವಾಗಿದೆ ಎಂದು ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ ಗೋವಿಂದ ಮಡಿವಾಳ ಹೇಳಿದ್ದಾರೆ. ಇಲಾಖೆಯು ಪರೀಕ್ಷೆ ನಡೆಸಿದ ಕ್ರಮ ಮತ್ತು ವಿಧಾನ ಅತ್ಯುತ್ತಮವಾಗಿದ್ದು, ವಿದ್ಯಾರ್ಥಿ-ಸ್ನೇಹಿಯಾಗಿತ್ತು. ದೋಷರಹಿತವಾದ ಸಮತೂಕದ ಪ್ರಶ್ನೆಪತ್ರಿಕೆ, ವ್ಯವಸ್ಥಿತವಾದ ಮೌಲ್ಯಮಾಪನ ವಿಧಾನ ಎಲ್ಲರಲ್ಲೂ ವಿಶ್ವಾಸವನ್ನು ಮೂಡಿಸಿ ಇದನ್ನು ಸಾಧ್ಯವಾಗಿಸಿತು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.