ಸಾರಾಂಶ
ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ಈ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಅಂತಹ ಯಾವುದೇ ಉತ್ಸಾಹ ಕಾಂಗ್ರೆಸ್ ಪಾಳಯದಲ್ಲಿ ಕಂಡುಬರುತ್ತಿಲ್ಲ.
ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುವಿಧಾನ ಪರಿಷತ್ ಸದಸ್ಯರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾದ ಸ್ಥಾನಕ್ಕೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಅಕ್ಟೋಬರ್ 21 ರಂದು ನಡೆಯುವ ಉಪ ಚುನಾವಣೆಗೆ ಬಿಜೆಪಿಯಲ್ಲಿ ಟಕೆಟ್‌ಗೆ ಪೈಪೋಟಿ ಶುರುವಾದರೆ, ಕಾಂಗ್ರೆಸ್‌ನಲ್ಲಿ ಅಷ್ಟಾಗಿ ಹುಮ್ಮಸ್ಸು ಕಾಣುತ್ತಿಲ್ಲ.
ಪರಿಷತ್‌ನ ಒಟ್ಟು ಆರು ವರ್ಷ ಅವಧಿಯಲ್ಲಿ ಮೂರು ವರ್ಷವನ್ನು ಕೋಟ ಶ್ರೀನಿವಾಸ ಪೂಜಾರಿ ಪೂರೈಸಿ ಈಗ ಸಂಸದರಾಗಿದ್ದಾರೆ. ಉಳಿದ ಮೂರು ವರ್ಷಗಳ ಅವಧಿಯಲ್ಲೂ ತನ್ನ ಸ್ಥಾನ ಉಳಿಸಿಕೊಳ್ಳಬೇಕು ಎನ್ನುವ ವಿಶ್ವಾಸವನ್ನು ಬಿಜೆಪಿ ಹೊಂದಿದೆ. ಈ ಉಪ ಚುನಾವಣೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳ ಸ್ಥಳೀಯ ಆಡಳಿತಗಳ ಪ್ರತಿನಿಧಿಗಳು ಮತ ಚಲಾಯಿಸಲಿದ್ದು, ಇದರಲ್ಲಿ ಬಿಜೆಪಿ ಬೆಂಬಲಿತರ ಸಂಖ್ಯೆಯೇ ಅಧಿಕವಾಗಿದೆ. ಹೀಗಾಗಿ ಬಿಜೆಪಿ ಪಾಳಯದಲ್ಲಿ ಅಭ್ಯರ್ಥಿ ಸ್ಥಾನಕ್ಕೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ. ಪ್ರಮುಖ ಐವರ ಹೆಸರು ಪ್ರಸ್ತಾಪ: ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ಇತ್ತೀಚೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಂಗಳೂರಿಗೆ ಭೇಟಿ ನೀಡಿದ ವೇಳೆ ಐದು ಮಂದಿ ಪ್ರಮುಖ ಆಕಾಂಕ್ಷಿಗಳ ಹೆಸರು ಪ್ರಸ್ತಾಪಗೊಂಡಿದೆ. ಮಾಜಿ ಸಂಸದ, ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಡುಪಿಯ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್, ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹಾಗೂ ಮುಖಂಡ ವಿಕಾಸ್ ಪುತ್ತೂರು ಹೆಸರು ಪೈಪೋಟಿಯಲ್ಲಿದೆ. ಜಾತಿವಾರು ಲೆಕ್ಕಾಚಾರದಲ್ಲಿ ಟಿಕೆಟ್ ಹಂಚಿಕೆಯಾದರೆ ಬಂಟ ಸಮುದಾಯದಲ್ಲಿ ನಳಿನ್ ಕುಮಾರ್ ಕಟೀಲ್ ಅಥವಾ ಉದಯ ಕುಮಾರ್ ಶೆಟ್ಟಿ, ಬಿಲ್ಲವರಲ್ಲಿ ಸತೀಶ್ ಕುಂಪಲ, ಹಿಂದುಳಿದ ವರ್ಗದಲ್ಲಿ ಪ್ರಮೋದ್ ಮಧ್ವರಾಜ್ ಅಥವಾ ವಿಕಾಸ್ ಪುತ್ತೂರು ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ. ಇದನ್ನು ಹೊರತುಪಡಿಸಿ ಅಚ್ಚರಿಯಾಗಿ ಬೇರೊಬ್ಬರ ಹೆಸರು ಪ್ರಕಟಗೊಳ್ಳುವುದನ್ನು ತಳ್ಳಿಹಾಕುವಂತಿಲ್ಲ ಎನ್ನುತ್ತವೆ ಪಕ್ಷ ಮೂಲಗಳು.ಕಾಂಗ್ರೆಸ್‌ನಲ್ಲಿ ನಿರುತ್ಸಾಹ: ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ಈ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಅಂತಹ ಯಾವುದೇ ಉತ್ಸಾಹ ಕಾಂಗ್ರೆಸ್ ಪಾಳಯದಲ್ಲಿ ಕಂಡುಬರುತ್ತಿಲ್ಲ.
ಕಾಂಗ್ರೆಸ್‌ನಲ್ಲಿ ಉಡುಪಿಯಿಂದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮುಖಂಡರಾದ ಎಂ.ಎ. ಗಫೂರ್, ಕಾರ್ಕಳದ ಉದಯ ಕುಮಾರ್, ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೆಸರು ಪ್ರಸ್ತಾಪದಲ್ಲಿದೆ. ಸ್ಥಳೀಯಾಡಳಿತದಲ್ಲಿ ಕಾಂಗ್ರೆಸ್ ಬೆಂಬಲಿತರ ಸಂಖ್ಯಾ ಬಲ ಕಡಿಮೆ ಇರುವುದರಿಂದ ಸ್ಪರ್ಧೆಗೆ ಅಷ್ಟಾಗಿ ಪೈಪೋಟಿ ಕಂಡುಬರುತ್ತಿಲ್ಲ ಎಂದೇ ತರ್ಕಿಸಲಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಇನ್ನಷ್ಟೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಬೇಕು. ನಾಮಪತ್ರ ಸಲ್ಲಿಕೆ ಸೆ.26 ರಿಂದ ಆರಂಭಗೊಳ್ಳಲಿದ್ದು, ಅದಕ್ಕೂ ಮೊದಲೇ ಎರಡೂ ಪಕ್ಷಗಳು ಸ್ಪರ್ಧಿಗಳ ಹೆಸರನ್ನು ಅಂತಿಮಗೊಳಿಸಲಿವೆ.ಸ್ಥಳೀಯಾಡಳಿತ ಬೆಂಬಲಿತರ ಬಲಾಬಲ
ಅವಿಭಜಿತ ದ.ಕ. ಜಿಲ್ಲೆಯ ಸ್ಥಳೀಯಾಡಳಿತಗಳಲ್ಲಿ ಸದ್ಯದ ಮಟ್ಟಿಗೆ ಬಿಜೆಪಿ ಬೆಂಬಲಿತರ ಪ್ರಾಬಲ್ಯ ಹೇಳಲಾಗುತ್ತಿದೆ. ಸುಮಾರು 6,200 ಮಂದಿ ಸದಸ್ಯರಿದ್ದು, ಅವರಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಸುಪ್ರೀಂ ಕೋರ್ಟ್ ಆದೇಶದಂತೆ ಈ ಬಾರಿ ಮತದಾನಕ್ಕೆ ಅವಕಾಶ ಇಲ್ಲ. ಉಳಿದಂತೆ 3,760 ಬಿಜೆಪಿ, 1,950 ಕಾಂಗ್ರೆಸ್, 250 ಎಸ್‌ಡಿಪಿಐ, 150 ಜೆಡಿಎಸ್ ಬೆಂಬಲಿತ ಸದಸ್ಯರಿದ್ದಾರೆ. ಇಲ್ಲಿ ಪ್ರಾಶಸ್ತ್ಯದ ಮತ ಚಲಾವಣೆ ಇರುವುದರಿಂದ ಯಾವುದೇ ಅಭ್ಯರ್ಥಿ ಗೆಲವಿಗೆ 3,050 ಮತಗಳ ಅಗತ್ಯ ಇದೆ.