ಶಿಕ್ಷಣ ವಂಚಿತ ಮಕ್ಕಳೇ ಜೀತದಾಳಾಗುವ ಸಾಧ್ಯತೆ ಹೆಚ್ಚು

| Published : Feb 10 2024, 01:49 AM IST

ಸಾರಾಂಶ

ಎಲ್ಲಿಯೇ ಆಗಲಿ ಈ ಪದ್ದತಿಯ ಸುಳಿಗೆ ಯಾರದಾರೂ ಸಿಲುಕಿದ್ದರೆ, ಅಂತಹ ಮಾಹಿತಿಯನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ, ಪೋಲೀಸ್, ಕಾರ್ಮಿಕ ಇಲಾಖೆಗಳಿಗೆ ಅಥವಾ ಕಾನೂನು ಸೇವಾ ಪ್ರಾಧಿಕಾರಗಳಿಗೆ ಮಾಹಿತಿ ನೀಡಿದರೆ, ನೊಂದವರಿಗೆ ನ್ಯಾಯ ಒದಗಿಸಲಾಗುವುದು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜೀತ ಪದ್ದತಿ ನಿರ್ಮೂಲನೆ ಕಾಯ್ದೆ 1976 ರಲ್ಲೇ ಜಾರಿಗೆ ಬಂದರೂ ಸಮಾಜದಲ್ಲಿ ಇಂದಿಗೂ ಜೀತ ಅಲ್ಲಲ್ಲಿ ಕಂಡುಬರುತ್ತಿದೆ. ಈ ಪಿಡುಗು ಸಂಪೂರ್ಣವಾಗಿ ನಿಲ್ಲಬೇಕು ಎಂದು ಜಿಲ್ಲಾ ಕಾನೂನು ಸೇವೇಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎ. ಅರುಣಾ ಕುಮಾರಿ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಕಾನೂನುಗಳ ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್ ಇವರ ಸಂಯುಕ್ತ ಆಶಯದಲ್ಲಿ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ''''''''ಜೀತ ಪದ್ದತಿ ನಿರ್ಮೂಲನಾ'''''''' ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಜೀತ ಕಂಡುಬಂದರೆ ಮಾಹಿತಿ ನೀಡಿ

ಶಿಕ್ಷಣದ ವಂಚಿತರಾದ ಮಕ್ಕಳು ಜೀತಪದ್ದತಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಜೀತ ಪದ್ದತಿಯ ಪೀಡುಗು ಸಂಪೂರ್ಣವಾಗಿ ನಿರ್ಮೂಲನೆ ಆಗಬೇಕು. ಎಲ್ಲಿಯೇ ಆಗಲಿ ಈ ಪದ್ದತಿಯ ಸುಳಿಗೆ ಯಾರದಾರೂ ಸಿಲುಕಿದ್ದರೆ, ಅಂತಹ ಮಾಹಿತಿಯನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ, ಪೋಲೀಸ್, ಕಾರ್ಮಿಕ ಇಲಾಖೆಗಳಿಗೆ ಅಥವಾ ಕಾನೂನು ಸೇವಾ ಪ್ರಾಧಿಕಾರಗಳಿಗೆ ಮಾಹಿತಿ ನೀಡಿದರೆ ಕಾನೂನು ಕ್ರಮ ತೆಗೆದುಕೊಂಡು ನೊಂದವರಿಗೆ ನ್ಯಾಯ ಒದಗಿಸಲಾಗುವುದು ಎಂದರು.

ಜೀತಮುಕ್ತರಿಗೆ ಮನೆ ನಿರ್ಮಾಣ

ಜಿಪಂ ಸಿಇಒ ಪ್ರಕಾಶ್.ಜಿ.ಟಿ.ನಿಟ್ಟಾಲಿ ಮಾತಾನಾಡಿ, ಜೀತಮುಕ್ತ ಕಾರ್ಯಗಳನ್ನು ಜಿಲ್ಲಾಡಳಿತ ಪ್ರಮಾಣಿಕವಾಗಿ ಕಾಲೋಚಿತವಾಗಿ ಮಾಡುತ್ತಿದೆ. ಜೀತಮುಕ್ತಿಯ ಜೊತೆಗೆ ಅವರಿಗೆ ಪುನರ್ ವಸತಿ ಕಲ್ಪಿಸುವ ಕೆಲಸಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಜೀತ ಮುಕ್ತರಿಗೆ 300ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಡಲಾಗಿದೆ. 700ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ. ನಿಯಾಮಾವಳಿ ರೀತ್ಯಾ ಅವರೆಲ್ಲರಿಗೂ ಸೂರು ಕಲ್ಪಿಸುವ ಕೆಲಸ ಆಗಲಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್ ಮಾತನಾಡಿದರು. ಜಿಪಂ ಉಪಕಾರ್ಯದರ್ಶಿ ಡಾ.ಎನ್. ಬಾಸ್ಕರ್, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ರಾಜಾ ಇಮಾಮ್ ಖಾಸಿಂ, ಯೋಜನಾ ನಿರ್ದೇಶಕ ಈಶ್ವರಪ್ಪ, ತಹಸೀಲ್ದಾರ್ ಎಂ.ಅನಿಲ್, ಮತ್ತಿತರರು ಇದ್ದರು.