ಶೃಂಗೇರಿ ಪಟ್ಟಣದ ಜನನಿಬಿಡ ಪ್ರದೇಶವಾದ ಕುರುಬಗೇರಿ (ಕೆ ವಿಆರ್ ರಸ್ತೆ)ಪ್ರತೀ ವರ್ಷ ಮಳೆಗಾಲದಲ್ಲಿ ತುಂಗಾ ನದಿಯ ಪ್ರವಾಹಕ್ಕೆ ಸಿಲುಕಿ ಇಲ್ಲಿನ ಜನ ಸಂಕಷ್ಟಕ್ಕೆ ಒಳಗಾಗುತ್ತಾರೆ. ಇದು ತಗ್ಗು ಪ್ರದೇಶವಾಗಿರುವುದರಿಂದ ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದಂತೆ ಪ್ರವಾಹದ ನೀರು ರಸ್ತೆ, ಮನೆಗಳಿಗೆ ನುಗ್ಗಿ ಜಲಾಶಯದಂತಾಗುತ್ತದೆ.

ಪದೇ ಪದೇ ಪ್ರವಾಹ । ಸಮಸ್ಯೆ ಪರಿಹಾರವಾದ ತಡೆಗೋಡೆ ಭಾಗ್ಯವಿಲ್ಲ । ಮಳೆಗಾಲದಲ್ಲಿ ರಸ್ತೆ, ಮನೆಯೊಳಗೆ ತುಂಗೆಯ ಪ್ರವಾಹ.

ನೆಮ್ಮಾರ್ ಅಬೂಬಕರ್

ಕನ್ನಡಪ್ರಭ ವಾರ್ತೆ, ಶೃಂಗೇರಿ

ಪಟ್ಟಣದ ಜನನಿಬಿಡ ಪ್ರದೇಶವಾದ ಕುರುಬಗೇರಿ (ಕೆ ವಿಆರ್ ರಸ್ತೆ)ಪ್ರತೀ ವರ್ಷ ಮಳೆಗಾಲದಲ್ಲಿ ತುಂಗಾ ನದಿಯ ಪ್ರವಾಹಕ್ಕೆ ಸಿಲುಕಿ ಇಲ್ಲಿನ ಜನ ಸಂಕಷ್ಟಕ್ಕೆ ಒಳಗಾಗುತ್ತಾರೆ. ಇದು ತಗ್ಗು ಪ್ರದೇಶವಾಗಿರುವುದರಿಂದ ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದಂತೆ ಪ್ರವಾಹದ ನೀರು ರಸ್ತೆ, ಮನೆಗಳಿಗೆ ನುಗ್ಗಿ ಜಲಾಶಯದಂತಾಗುತ್ತದೆ.

ಅಲ್ಲದೇ ಭಾರತೀ ಬೀದಿ ಕೆವಿಆರ್ ವೃತ್ತ ಸಂಪರ್ಕ ಪ್ಯಾರಲಲ್ ಬೈಪಾಸ್ ರಸ್ತೆಗೆ ನಿರ್ಮಿಸಿರುವ ತಡೆಗೋಡೆ ಎತ್ತರವಿಲ್ಲದೆ ರಸ್ತೆಯೆಲ್ಲ ನೀರು ತುಂಬಿ ಸಂಪರ್ಕವೇ ಕಡಿತಗೊಳ್ಳುತ್ತದೆ.

ಈ ಪ್ರದೇಶ ತುಂಗಾನದಿ ತೀರದಲ್ಲಿದ್ದು ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ರಸ್ತೆ ಮನೆಗಳಿಗೂ ನೀರು ನುಗ್ಗುತ್ತದೆ. ಇಡೀ ಪ್ರದೇಶವೇ ಜಲಾವೃತಗೊಂಡು ಸಂಪರ್ಕ ಕಡಿದು ಜಲದಿಗ್ಬಂದನದಲ್ಲಿ ಇರುವಂತಾ ಪರಿಸ್ಥಿತಿಯನ್ನು ನಿವಾಸಿಗಳು ಎದುರಿಸುತ್ತಾರೆ. ಅದರಲ್ಲೂ ತುಂಗಾ ನದಿಯಲ್ಲಿ ಪ್ರವಾಹ ಬಂದರೆ ಇಲ್ಲಿನ ಜನ ಜೀವಭಯದಲ್ಲಿ ರಾತ್ರಿ ಕಳೆಯ ಬೇಕಾಗುತ್ತದೆ. ಗಾಂಧಿ ಮೈದಾನದಿಂದ ಹಿಡಿದು ಕೆವಿಆರ್ ವೃತ್ತ ಮೆಣಸೆ ವೃತ್ತದ ವರೆಗೂ ಪ್ರವಾಹದಿಂದ ನೀರು ಆವರಿಸುವುದರಿಂದ ಅನೇಕ ಬಾರಿ ಪ್ರವಾಹದಲ್ಲಿ ನಿವಾಸಿಗಳು ಸಿಲುಕುತ್ತಾರೆ. ಇವರ ಸ್ಥಳಾಂತರಕ್ಕೆ ಬೋಟ್ ವ್ಯವಸ್ಥೆ ಮಾಡಿ ಆಶ್ರಯಕ್ಕೆ ಗಂಜಿ ಕೇಂದ್ರಗಳನ್ನು ತೆರೆಯುವ ಸಂದರ್ಭ ಬಂದೊದಗಿದೆ. ಆದರೆ ಇಂದಿಗೂ ಪ್ರವಾಹದ ಭೀತಿಯಿಂದ ಈ ಜನರಿಗೆ ಮುಕ್ತಿ ಸಿಕ್ಕಿಲ್ಲ.

ಇದು ಇಂದು ನಿನ್ನೆಯದಲ್ಲ. ಹಲವು ವರ್ಷಗಳ ಸಮಸ್ಯೆ. ಮಳೆಗಾಲ ಬಂದರೆ ಜನರಿಗೆ ಖುಷಿ. ಆದರೆ ಇಲ್ಲಿಯವರಿಗೆ ಮಾತ್ರ ಮಳೆಗಾಲ ಆತಂಕವನ್ನೆ ಹೊತ್ತು ತರುತ್ತದೆ. ಪದೇ ಪದೇ ಉಂಟಾಗುವ ತುಂಗೆಯ ಪ್ರವಾಹ ತಡೆಗೆ ಶಾಶ್ವತ ಪರಿಹಾರ ದೊರಕಿಸುವ ಪ್ರಯತ್ನ ಇನ್ನೂ ನಡೆದಿಲ್ಲ. ಜಲಾವೃತ ತಪ್ಪಿಸಲು ತಡೆಗೋಡೆ ನಿರ್ಮಾಣವೂ ಆಗಿಲ್ಲ. ಅಂತೂ ನಿವಾಸಿಗಳಿಗೆ ನೆಮ್ಮದಿ ಇಲ್ಲದಂತಾಗಿದೆ.

ಈ ಪ್ರವಾಹದ ಉಂಟಾದರೆ ಸ್ಥಳೀಯರು ಮನೆಗಳಲ್ಲಿ ಇರಲೂ ಆಗದೆ ಬೇರೆಡೆಗೆ ಸ್ಥಳಾಂತರ ವಾಗಲೂ ಆಗದ ದಯನೀಯ ಪರಿಸ್ಥಿತಿ ಎದುರಿಸುತ್ತಾರೆ.

ಮೆಣಸೆ ಕೊರಡ್ಕಲ್ ಹೆಲಿಪ್ಯಾಡ್ ನಿಂದ ಶೃಂಗೇರಿಗೆ ಸಂಪರ್ಕ ಕಲ್ಪಿಸುವ ಮೆಣಸೆ ಕೆವಿಆರ್ ರಸ್ತೆ, ಬೈಪಾಸ್ ರಸ್ತೆ ಮುಖ್ಯ ಕೇಂದ್ರ ಬಿಂದು. ಶೃಂಗೇರಿಗೆ ಭೇಟಿ ನೀಡುವ ಗಣ್ಯರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಅಲ್ಲದೇ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಮೆಣಸೆ ಜಯಪುರ ಕಡೆಗೆ ಸಂಚರಿಸುವ ವಾಹನಗಳು ಇದೇ ರಸ್ತೆಯಲ್ಲಿ ಹಾದು ಹೋಗುತ್ತದೆ.ಆದರೆ ಮಳೆಗಾಲದ ಪ್ರವಾಹ, ಜಲಾವೃತಗೊಂಡು ಜನ ಅನುಭವಿಸುವ ಯಾತನೆ ಮಾತ್ರ ಯಾರಿಗೂ ಗೋಚರಿಸುತ್ತಿಲ್ಲ.

ಗಾಂಧೀ ಮೈದಾನ ಕಡೆಯಿಂದ ಹಾದು ಬರುವ ತುಂಗಾ ನದಿ ಪ್ರವಾಹ ನೇರ ಇಲ್ಲಿಗೆ ನುಗ್ಗುತ್ತದೆ. ಇಲ್ಲಿಗೊಂದು ತಡೆಗೋಡೆ ನಿರ್ಮಿಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಜಲದಿಗ್ಬಂಧನ ದಿಂದಲೂ ಬಿಡುಗಡೆ ಸಿಗುತ್ತದೆ. ರಸ್ತೆ ಸಂಪರ್ಕವೂ ಕಡಿತವಾಗುವುದಿಲ್ಲ. ಇನ್ನಾದರೂ ಸರ್ಕಾರ ಸಂಬಂಧಪಟ್ಟ ಇಲಾಖೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇಲ್ಲಿ ಗೊಂದು ಶಾಶ್ವತ ತಡೆಗೋಡೆ ನಿರ್ಮಿಸಲು ಮುಂದಾಗಿ ಪ್ರತೀ ವರ್ಷದ ಪ್ರವಾಹದ ಆತಂಕದಿಂದ ಜನರನ್ನು ಹೊರತರುವ ಕೆಲಸ ಮಾಡಬೇಕಿದೆ.ತಡೆಗೋಡೆ ಅಗತ್ಯ

ಪ್ರತೀ ವರ್ಷ ಪ್ರವಾಹ ನೀರು ರಸ್ತೆಗೆ ನುಗ್ಗಿ ಈ ಪ್ರದೇಶವೇ ಜಲಾವೃತಗೊಳ್ಳುತ್ತದೆ. ತುಂಗಾನದಿಯಲ್ಲಿ ಪ್ರವಾಹ ಹೆಚ್ಚಾದಂತೆ ಇಲ್ಲಿಯ ನಿವಾಸಿಗಳಲ್ಲಿ ಆತಂಕ ಹೆಚ್ಚಾಗುತ್ತದೆ. ಜೀವಭಯದಲ್ಲೆ ದಿನ ಕಳೆವ ಪರಿಸ್ಥಿತಿ ನಿವಾರಣೆಗೆ ಬೈಪಾಸ್ ರಸ್ತೆಯ ತಡೆಗೋಡೆ ಎತ್ತರಿಸಬೇಕು. ಹಾಗೇಯೇ ಇಲ್ಲಿಗೂ ತಡೆಗೋಡೆ ನಿರ್ಮಿಸಬೇಕು

--ಅಕ್ರಂ, ಸ್ಥಳೀಯ ನಿವಾಸಿ

--

ಅಗತ್ಯ ಕ್ರಮ ಕೈಗೊಳ್ಳಬೇಕು

ದಶಕಗಳ ಸಮಸ್ಯೆಯಾದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ. ಅನೇಕ ಕಡೆಗಳಲ್ಲಿ ನದಿ ತೀರಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಆದರೆ ಇದು ಜನನಿಬಿಡ ಪ್ರದೇಶ, ಮುಖ್ಯ ರಸ್ತೆಯಾಗಿದ್ದರೂ ಪ್ರತೀ ವರ್ಷ ಪದೇ ಪದೇ ಪ್ರವಾಹಕ್ಕೆ ತುತ್ತಾಗುತ್ತಿದೆ. ಸರ್ಕಾರ, ಜನಪ್ರತಿನಿದಿಗಳು ಗಂಭೀರವಾಗಿ ಪರಿಗಣಿಸಿ ಶಾಶ್ವದ ಪರಿಹಾರ ದೊರಕಿಸಬೇಕು.

--- ಅಶ್ವಥ್ ಸ್ಥಳೀಯ ನಿವಾಸಿ

7 ಶ್ರೀ ಚಿತ್ರ 3-

ಶೃಂಗೇರಿ ಪಟ್ಟಣದ ಜನನಿಬಿಡ ಪ್ರವಾಹ ಪೀಡಿತ ಕುರುಬಗೇರಿ ಪ್ರದೇಶ ತುಂಗಾ ನದಿಯ ಪ್ರವಾಹದಲ್ಲಿ ಜಲಾವೃತಗೊಳ್ಳುತ್ತಿರುವುದು.