ಸಾರಾಂಶ
ಹುಬ್ಬಳ್ಳಿ:
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕ ಕಂ ನಿರ್ವಾಹಕ ಹುದ್ದೆಗಳ ನೇಮಕಾತಿಯಲ್ಲಿ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದ ವಿವಿಧೆಡೆಯಿಂದ ಬಂದ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪೋನ್ ಮೂಲಕ ನೀಡಿದ ಭರವಸೆ ಮೇರೆಗೆ ಬುಧವಾರ ರಾತ್ರಿ ತಾತ್ಕಾಲಿಕವಾಗಿ ಹೋರಾಟ ಹಿಂಪಡೆಯಲಾಯಿತು.ಮೈಸೂರು, ಬೀದರ, ಕಲಬುರಗಿ, ವಿಜಯಪುರ, ಬಾಗಲಕೋಟ, ರಾಯಚೂರ, ಕೋಲಾರ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಿಂದ ನೂರಾರು ಆಕಾಂಕ್ಷಿ ಅಭ್ಯರ್ಥಿಗಳು ಬುಧವಾರ ಬೆಳಗ್ಗೆಯಿಂದಲೇ ಧರಣಿ ಆರಂಭಿಸಿದ್ದರು. ಪ್ರತಿಭಟನಾ ಸ್ಥಳದಲ್ಲೇ ಅಡುಗೆ ತಯಾರಿಸಿ ಊಟ ಮಾಡಿ ಪ್ರತಿಭಟನೆ ನಡೆಸಿದರು. ಬೆಳಿಗ್ಗೆಯೇ ಪ್ರಾರಂಭವಾಗಿದ್ದ ಧರಣಿ ರಾತ್ರಿ 8ರ ವರೆಗೆ ಮುಂದುವರಿದಿತ್ತು.
ಬೇಡಿಕೆ ಏನು?ಸಂಸ್ಥೆಯಲ್ಲಿ 2019ರಲ್ಲಿ ಚಾಲಕ ಕಂ ನಿರ್ವಾಹಕ 2814 ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಇದರಂತೆ ಅರ್ಹ ಅಭ್ಯರ್ಥಿಗಳಿಗೆ ಎಲ್ಲಾ ವಿಧದ ಪರೀಕ್ಷೆಗಳನ್ನು ಮಾಡಲಾಗಿದೆ. ಆದರೆ, 1000 ಹುದ್ದೆ ಮಾತ್ರ ಭರ್ತಿ ಮಾಡಲಾಗಿದೆ. ಅಧಿಸೂಚನೆಯಂತೆ ಉಳಿದ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ. ಭರವಸೆ ಈಡೇರಿಸುವರೆಗೂ ಮುಷ್ಕರ ಮುಂದುವರಿಸುತ್ತೇವೆ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಅನಿರ್ದಿಷ್ಟಾವಧಿವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ಕೂಡ ನೀಡಿದರು. ಮುಷ್ಕರ ಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕರಾದ ಮಹೇಶ ಟೆಂಗಿನಕಾಯಿ ಹಾಗೂ ಎಂ.ಆರ್. ಪಾಟೀಲ ಸೇರಿದಂತೆ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಕೊನೆಗೆ ಶಾಸಕರಾದ ಟೆಂಗಿನಕಾಯಿ, ಎಂ.ಆರ್.ಪಾಟೀಲ, ಸಂಸ್ಥೆ ಎಂಡಿ ಪ್ರಿಯಾಂಗಾ, ಪೊಲೀಸ್ ಕಮಿಷನರ್ ಶಶಿಕುಮಾರ ಎಲ್ಲರೂ ಸೇರಿ ಚರ್ಚೆ ನಡೆಸಿದರು. ಜತೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಪೋನ್ ಮೂಲಕ ಮಾತನಾಡಿದರು. ಸಚಿವರು ನ.7ರಂದು ಹುಬ್ಬಳ್ಳಿಗೆ ಆಗಮಿಸಿದ ವೇಳೆ ಅಭ್ಯರ್ಥಿಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಪ್ರತಿಭಟನೆ ಹಿಂಪಡೆಯಲಾಗಿದೆ. ಆದರೆ, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅಭ್ಯರ್ಥಿಗಳೆಲ್ಲರೂ ನ. 6ರಂದು ಹುಬ್ಬಳ್ಳಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಸಚಿವರೊಂದಿಗೆ ಚರ್ಚೆ ನಡೆಸಿದ ಬಳಿಕ ಸಮಸ್ಯೆ ಬಗೆಹರಿದರೆ ಹೋಗುತ್ತೇವೆ. ಇಲ್ಲದಿದ್ದಲ್ಲಿ ಮತ್ತೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.ಹೋರಾಟಗಾರ ಸುಭಾಸಸಿಂಗ್ ಜಮಾದಾರ, ತನ್ವಿರಯ್ಯ ಕಡ್ಲಿಬ್ಯಾಳಿಮಠ, ಮಹಾಂತೇಶ ಹಾವೇರಿ, ನವೀನ ಬಳಿಗೇರ, ಕಲಂದರ ನರಗುಂದ, ಫಕ್ಕೀರಗೌಡ ಪಾಟೀಲ ಸೇರಿದಂತೆ ಹಲವರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ರಮೇಶ ಮಾನೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದದ ನೂರಾರು ಉದ್ಯೋಗಾಕಾಂಕ್ಷಿಗಳು, ಕುಟುಂಬಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
;Resize=(128,128))
;Resize=(128,128))